ಉಡುಪಿ: ಜಿಲ್ಲೆಯ ಉಚಿತ ಹೆರಿಗೆ ಆಸ್ಪತ್ರೆ ನಡೆಸಲು ಆಗಲ್ಲ ಎಂದು ಉದ್ಯಮಿ ಬಿ.ಆರ್. ಶೆಟ್ಟಿ ಹೇಳಿದ್ದಾರೆ. ಉತ್ತಮ ಗುಣಮಟ್ಟದ ಈ ಸುಸಜ್ಜಿತ ಕಟ್ಟಡದಲ್ಲಿ 10 ಸಾವಿರಕ್ಕೂ ಅಧಿಕ ಹೆರಿಗೆ ನಡೆಸಿದ ಆಸ್ಪತ್ರೆ ಎಂದೇ ಖ್ಯಾತಿ ಪಡೆದಿದ್ದು, ಈಗ ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಆಸ್ಪತ್ರೆಯ 250 ಸಿಬ್ಬಂದಿ ಬದುಕೂ ಅತಂತ್ರವಾಗಿದೆ. ಈ ಮಧ್ಯೆ ಆಸ್ಪತ್ರೆ ವಿಚಾರದಲ್ಲಿ ಮಾಜಿ ಸಚಿವರು ಹಾಗೂ ಹಾಲಿ ಶಾಸಕರ ವಾಕ್ಸಮರ ಜೋರಾಗಿದೆ..
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಒಪ್ಪಂದ ಈಗ ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸರ್ಕಾರದ ಹೆರಿಗೆ ಆಸ್ಪತ್ರೆಯನ್ನು ತಾನು ನಡೆಸುತ್ತೇನೆ ಎಂದು ಅಬುದಾಬಿಯ ಉದ್ಯಮಿ ಬಿ.ಆರ್. ಶೆಟ್ಟಿ ತಾನೇ ಮುಂದೆ ಬಂದಿದ್ದರು.
200 ಬೆಡ್ನ ಉಚಿತ ಹೆರಿಗೆಯ ಸರ್ಕಾರಿ ಆಸ್ಪತ್ರೆಯನ್ನು ಖಾಸಗಿಯಾಗಿ ನಿರ್ವಹಣೆ ಮಾಡೋದು ಮತ್ತು ಇದಕ್ಕೆ ಬದಲಾಗಿ 400 ಬೆಡ್ನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ನೂರಾರು ಕೋಟಿ ಮೌಲ್ಯದ ಸರ್ಕಾರದ 4.7 ಎಕರೆ ಭೂಮಿಯನ್ನು ಶೆಟ್ಟರಿಗೆ ಕೊಡೋದು ಎಂದು MOU ಆಗಿತ್ತು. ಆದರೆ, ಶೆಟ್ಟರ ಸಾಮ್ರಾಜ್ಯವೀಗ ಮುಳುಗಿದೆ. ಆಸ್ಪತ್ರೆ ನಡೆಸೋಲ್ಲ ಎಂದು ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಈ ಬಹುಮಹಡಿ ಕಟ್ಟಡವನ್ನು ಆರೋಗ್ಯ ಇಲಾಖೆಯಿಂದ ನಿರ್ವಹಿಸಲು ಸಾಧ್ಯವಿಲ್ಲ. ಆಸ್ಪತ್ರೆಯ 250 ಸಿಬ್ಬಂದಿಗೆ ಸಂಬಳ ಕೊಡದೇ ಮೂರು ತಿಂಗಳಾಗಿವೆ. ಈ ಬಗ್ಗೆ ಶಾಸಕ ರಘುಪತಿ ಭಟ್ ಹೇಳೋದು ಹೀಗೆ, ಬಿಆರ್ ಶೆಟ್ಟಿ ಆರ್ಥಿಕವಾಗಿ ನಷ್ಟದಲ್ಲಿದ್ದಾರೆ. ಅದು ಅವರ ಸಮಸ್ಯೆಯೇ ಹೊರತು ನಮ್ಮ ಸಮಸ್ಯೆ ಅಲ್ಲ. ಈ ಹಂತದಲ್ಲಿ ಕಟ್ಟಡದ ವಿನ್ಯಾಸ ಮತ್ತಿತರ ಖರ್ಚುಗಳ ವಿಷಯ ನೋಡಿದಾಗ ಸರ್ಕಾರ ನಡೆಸುವುದು ಕಷ್ಟ. ಹಿಂದೆ ಆದ ಒಪ್ಪಂದದಂತೆ ಅವರೇ ಆಸ್ಪತ್ರೆಯನ್ನು ಮುನ್ನಡೆಸಿಕೊಂಡು ಹೋಗಬೇಕು ಶಾಸಕ ರಘುಪತಿ ಭಟ್ ಎಂದು ಹೇಳಿದ್ದಾರೆ.
ಈ ಹಿಂದೆ ಸರ್ಕಾರದ ನಿರ್ವಹಣೆಯಲ್ಲಿ 70 ಬೆಡ್ನ ಹೆರಿಗೆ ಆಸ್ಪತ್ರೆ ಸುಸಜ್ಜಿತವಾಗಿಯೇ ನಡೆಯುತ್ತಿತ್ತು. ಆದರೆ ತನ್ನ ತಂದೆ-ತಾಯಿಯ ಹೆಸರಲ್ಲಿ ತವರು ಜಿಲ್ಲೆಯಲ್ಲಿ ಆಸ್ಪತ್ರೆ ಮಾಡುವ ಶೆಟ್ಟರ ಕನಸಿಗೆ ಸರ್ಕಾರ ತನ್ನ ಆಸ್ತಿಯನ್ನೇ ಮಾರಿಕೊಂಡಿತ್ತು. ಕೂಸಮ್ಮ ಶಂಭು ಶೆಟ್ಟರ ಹೆಸರಲ್ಲಿ 200 ಬೆಡ್ನ ಆಸ್ಪತ್ರೆಯೂ ನಿರ್ಮಾಣ ಆಯ್ತು. ಕೇವಲ ಎರಡೂವರೆ ವರ್ಷದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ವಾತಾವರಣದಲ್ಲಿ 10 ಸಾವಿರ ಬಡ ಮಹಿಳೆಯರ ಹೆರಿಗೆ ನಡೆಯಿತು. ಆದರೆ ಈಗ ಬಿ.ಆರ್.ಎಸ್. ಗ್ರೂಪ್ ಹಿಂದಕ್ಕೆ ಸರಿದಿದೆ.
ತಿಂಗಳಿಗೆ 15 ಲಕ್ಷ ಕರೆಂಟ್ ಬಿಲ್ ಸೇರಿದಂತೆ 25 ಲಕ್ಷ ನಿರ್ವಹಣಾ ವೆಚ್ಚ ಬರುವ ಆಸ್ಪತ್ರೆಯನ್ನು ಸರ್ಕಾರದಿಂದಲೂ ನಿರ್ವಹಿಸಲು ಸಾಧ್ಯವಿಲ್ಲ. ಸಿಬ್ಬಂದಿ ಸಂಬಳಕ್ಕೆ 45 ಲಕ್ಷ ರುಪಾಯಿ ಬೇಕು. ಇಷ್ಟೆಲ್ಲಾ ಹಣ ಹೊಂದಿಸೋದು ಸರ್ಕಾರದಿಂದ ಸಾಧ್ಯವೇ ಹೇಳಿ? ಎಂದು ಶಾಸಕರ ಪರ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಏಳು ಮಹಡಿಯ ಸುಸಜ್ಜಿತ ಕಟ್ಟಡವನ್ನು ನಿರುಪಯುಕ್ತವಾಗಿ ಬಿಡುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ಮಧ್ಯ ಪ್ರವೇಶ ಮಾಡಿ ಇದನ್ನು ಸರಿ ಪಡಿಸಬೇಕು.ಬಡವರಿಗೆ ಒಳ್ಳೆಯ ಆಸ್ಪತ್ರೆ ಉಪಯೋಗ ಆಗುವಂತಾಗಲಿ ಎಂದು ಶಾಸಕರಿಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಟಾಂಗ್ ನೀಡಿದ್ದಾರೆ. 200 ಬೆಡ್ ಆಸ್ಪತ್ರೆ ಸರ್ಕಾರಕ್ಕೆ ಯಾಕೆ ನಡೆಸಲು ಆಗಲ್ಲ ಅಂತ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಉಡುಪಿಯಲ್ಲಿ ಸಂಬಳಕ್ಕಾಗಿ ವೈದ್ಯರು, ಸಿಬ್ಬಂದಿಯ ಪ್ರತಿಭಟನೆ: ರೋಗಿಗಳು ಕಂಗಾಲು
ಉಚಿತ ಆಸ್ಪತ್ರೆಗೆ ಪ್ರತಿಯಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ನೀಡಿದ್ದ ಎರಡೂವರೆ ಎಕರೆ ಭೂಮಿಯಲ್ಲಿ ಗುಂಡಿ ತೋಡಲಾಗಿದೆ. ಈ ಭೂಮಿಯಲ್ಲಿ ಯಾವುದೇ ನಿರ್ಮಾಣ ಮಾಡುವ ಪರಿಸ್ಥಿತಿ ಇಲ್ಲ. ಇತ್ತ ಹೆರಿಗೆ ಆಸ್ಪತ್ರೆಯ ಕಟ್ಟಡವೂ ನಿಷ್ಪ್ರಯೋಜಕವಾಗುವ ಅಪಾಯ ಎದುರಾಗಿದೆ. ಕೇವಲ ಎರಡು ಪುಟದ MOU ಬಿಟ್ಟರೆ ಅಂದಿನ ರಾಜ್ಯ ಸರ್ಕಾರ ಪರ್ಮನೆಂಟ್ ಅಗ್ರಿಮೆಂಟ್ ಕೂಡಾ ಮಾಡಿಕೊಂಡಿಲ್ಲ.