ಉಡುಪಿ : ಗಣರಾಜ್ಯೋತ್ಸವದ ಹಿನ್ನೆಲೆ ಕರಾವಳಿ ಕಾವಲು ಪಡೆಯು ಮಲ್ಪೆ ಕಡಲ ತೀರದಿಂದ 8 ಕಿ.ಮೀ. ದೂರದ ಆಳವಾದ ಸಮುದ್ರದಲ್ಲಿ ರೋಚಕ ಕಾರ್ಯ ಚಟುವಟಿಕೆಗಳ ಪ್ರದರ್ಶನ ನಡೆಸಿದೆ. ಮೀನುಗಾರಿಕೆಗೆ ಬೋಟ್ಗಳನ್ನು ಅಡ್ಡಗಟ್ಟಿ ದಾಖಲೆ ಪರಿಶೀಲನೆ ಜೊತೆಗೆ ಸಮುದ್ರದದಲ್ಲಾಗುವ ಕಾರ್ಯ ಚಟುವಟಿಕೆಗಳ ಮಾಹಿತಿ ಕಲೆ ಹಾಕಿದೆ.
ಸಮುದ್ರ ತೀರದಿಂದ 12 ನಾಟಿಕಲ್ ವ್ಯಾಪ್ತಿಯು, ಕರಾವಳಿ ಕಾವಲು ಪೊಲೀಸರ ಸುಪರ್ದಿಗೆ ಬರುತ್ತದೆ. ಆದ್ದರಿಂದ ಕಾನೂನು ಬಾಹಿರ ಚಟುವಟಿಕೆಗಳಾದ ಮದ್ಯ, ಗಾಂಜಾ ಸಾಗಾಟ ತಡೆ, ಅವಧಿ ಮುಗಿದ ಪಾಸ್ಪೋರ್ಟ್ ಉಪಯೋಗಿಸಿ ಪ್ರಯಾಣಿಸುವ ವಿದೇಶಿಯರ ತಪಾಸಣೆಯ ಜವಾಬ್ದಾರಿ ಕರಾವಳಿ ಕಾವಲು ಪೊಲೀಸರ ಮೇಲಿದೆ. ಆದ್ದರಿಂದ ಈ ಕಾರ್ಯಾಚರಣೆಯು ನಡೆದಿದೆ.
ಕಡಲಿನಲ್ಲಿ ರಾತ್ರಿ-ಹಗಲು ಕಸುಬು ಮಾಡುವ ಮೀನುಗಾರರನ್ನು ಪೊಲೀಸರು ವಿಶ್ವಾಸಕ್ಕೆ ಪಡೆದಿದ್ದಾರೆ. ಕಡಲ ತೀರದಲ್ಲಿ ನೆಲೆಸಿರುವ ಸುಮಾರು 200 ಮಂದಿ ಮೀನುಗಾರರ ಕುಟುಂಬಗಳು ಪೊಲೀಸರ ಜೊತೆ ಕೈ ಜೋಡಿಸಿ ಕೆಲಸ ಮಾಡುತ್ತಿವೆ. ಅನುಮಾನಾಸ್ಪದ ದೋಣಿಗಳು, ಸಂಶಯಾಸ್ಪದ ವ್ಯಕ್ತಿಗಳು ಕಾಣಿಸಿದ್ದಲ್ಲಿ, ತಕ್ಷಣ ಕೇಂದ್ರ ಸ್ಥಾನಕ್ಕೆ ಕರೆ ಬರುತ್ತದೆ. ಕರೆ ಬಂದ ತಕ್ಷಣ ಕರಾವಳಿ ಕಾವಲು ಪೊಲೀಸರ ಗಸ್ತು ಬೋಟ್ ಕಡಲಿಗಿಳಿಯುತ್ತದೆ.
ಚಂಡಮಾರುತ ಹಾಗೂ ವಾಯುಭಾರ ಕುಸಿತದ ಸಂದರ್ಭದಲ್ಲಿ, ಅರಬ್ಬಿ ಸಮುದ್ರದಲ್ಲಿ ಸಾಕಷ್ಟು ಅವಘಡ ನಡೆಯುತ್ತವೆ. ಈ ಸಂದರ್ಭ ಮೀನುಗಾರರ ರಕ್ಷಣೆಗೆ ಬೇಕಾದ ಸುಸಜ್ಜಿತವಾದ ದೊಡ್ಡ ಗಾತ್ರದ ಸ್ಪೀಡ್ ಬೋಟ್ಗಳು ಕರಾವಳಿ ಕಾವಲು ಪೊಲೀಸರ ಬಳಿ ಇಲ್ಲ. ಅನಾಹುತಗಳಾದಾಗ ಸಮುದ್ರದಲ್ಲಿ ಚಿಕಿತ್ಸೆ ಕೊಡುವ ಆ್ಯಂಬುಲೆನ್ಸ್ ಅವಶ್ಯಕತೆಯೂ ಇದೆ. ಜೊತೆಗೆ ಖಾಲಿಯಿರುವ ಸುಮಾರು 200 ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಇದೆಲ್ಲಾ ಆದಲ್ಲಿ ಕೋಸ್ಟಲ್ ಪೊಲೀಸರಿಗೆ ಇನ್ನಷ್ಟು ಶಕ್ತಿ ಸಿಗಲಿದೆ.