ಉಡುಪಿ: ಕರಾವಳಿಯ ಗಂಡುಕಲೆ ಯಕ್ಷಗಾನ. ಮಳೆಗಾಲದಲ್ಲಿ ಯಕ್ಷಗಾನ ಮೇಳಗಳಿಗೆ 6 ತಿಂಗಳುಗಳ ಕಾಲ ಬಿಡುವು. ಈ ಸಂದರ್ಭದಲ್ಲಿ ಮೇಳದಲ್ಲಿರುವವರು ಪರ್ಯಾಯ ಉದ್ಯೋಗವನ್ನು ಮಾಡುತ್ತಾರೆ. ಅದು ಕೂಡ ಯಕ್ಷಗಾನಕ್ಕೆ ಸಂಬಂಧಿಸಿರುವಂತದ್ದೇ ಆಗಿದೆ. ಈ ಬಗೆಗಿನ ಮಾಹಿತಿ ಇಲ್ಲಿದೆ.
ಕರಾವಳಿಯಲ್ಲಿ ಯಕ್ಷಗಾನ ಮೇಳ ಅಂತಾರೆ. ಮಳೆಗಾಲದ ಸಂದರ್ಭದಲ್ಲಿ 6 ತಿಂಗಳುಗಳ ಕಾಲ ಯಕ್ಷಗಾನ ಮೇಳಗಳ ತಿರುಗಾಟ ನಡೆಸುವುದಿಲ್ಲ. ಹೀಗಾಗಿ, ಮೇಳದ ಕಲಾವಿದರು ಈ ಸಮಯದಲ್ಲಿ ಪರ್ಯಾಯ ಉದ್ಯೋಗವಾಗಿ ಇದರ ಇನ್ನೊಂದು ಪ್ರಕಾರವಾದ ಚಿಕ್ಕಮೇಳದಲ್ಲಿ ಪಾಲ್ಗೊಳ್ಳುತ್ತಾರೆ.
ಇದರ ವಿಶೇಷವೇನೆಂದರೆ ಮನೆ ಮನೆಗೆ ತೆರಳಿ ರಾಮಾಯಣ ಅಥವಾ ಮಹಾಭಾರತದ 15 ನಿಮಿಷಗಳ ಯಾವುದಾದರೂ ಒಂದು ಪ್ರಸಂಗದ ಆಯ್ದಭಾಗವನ್ನು ಆಡಿ ತೋರಿಸುವುದು. ಈ ತಂಡದಲ್ಲಿ ಹಿಮ್ಮೇಳಕ್ಕೆ ಇಬ್ಬರು, ವೇಷಧಾರಿಗಳಿಬ್ಬರು ಇದ್ದು ಒಟ್ಟು 4 ರಿಂದ 5 ಮಂದಿ ಇರುತ್ತಾರೆ. ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮನೆ ಮನೆಗೆ ತೆರಳಿ ಚಿಕ್ಕಾಟವನ್ನು ನಡೆಸುತ್ತಾರೆ.
ಒಂದು ಊರಿನ 25 ರಿಂದ 30 ಮನೆಗಳಿಗೆ ಬೆಳಗ್ಗೆ ಭೇಟಿ ನೀಡಿ ಪತ್ರವನ್ನು ಕೊಟ್ಟು ಸಂಜೆ ಬಂದು ಯಕ್ಷಗಾನ ಆಡಿ ತೋರಿಸುತ್ತೇವೆ ಎಂದು ಹೇಳಿ ಹೋಗುತ್ತಾರೆ. ನಂತರ ಮನೆಯವರು ಅದಕ್ಕೆ ಬೇಕಾದ ಸಿದ್ದತೆಯನ್ನು ನಡೆಸಿರುತ್ತಾರೆ. ಮಳೆಗಾಲದ ಸಂದರ್ಭದಲ್ಲಿ ಇದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ಯಕ್ಷಗಾನದ ಒಂದು ಸಂಪ್ರದಾಯವಾಗಿದೆ.
ಯಕ್ಷಗಾನ ಕಲಾವಿದರ ಗುಣಮಟ್ಟದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದಕ್ಕೂ ಇದು ಸಹಕಾರಿ. ಮನೆ ಮನೆಗೆ ತೆರಳಿದಾಗ ಮನೆಯವರೂ ಉತ್ತಮ ಗೌರವಾತಿಥ್ಯವನ್ನು ನೀಡಿ ಇವರನ್ನು ಸತ್ಕರಿಸುತ್ತಾರೆ. ವರ್ಷದಲ್ಲಿ ಒಂದು ಭಾರಿಯಾದರೂ ಮನೆಯಲ್ಲಿ ಗೆಜ್ಜೆ ಸೇವೆ ನಡೆದರೆ ಒಳ್ಳೆದು ಎಂಬುದು ಇಲ್ಲಿನ ಜನರ ಧಾರ್ಮಿಕ ನಂಬಿಕೆಯು ಹೌದು.
ಒಟ್ಟಿನಲ್ಲಿ ಯಕ್ಷಗಾನ ಕಲಾವಿದರಿಗೆ ಇದು ಮಳೆಗಾಲದ ಪರ್ಯಾಯ ಉದ್ಯೋಗ. ಇವರನ್ನು ಪ್ರೋತ್ಸಾಹಿಸುವಂತಹ ಕಾರ್ಯವು ಇಲ್ಲಿನ ಜನರಿಂದ ಆಗುತ್ತಿದೆ. ಮನೆಯಲ್ಲಿ ಯಕ್ಷಗಾನ ನಡೆಯುವುದರಿಂದ ಮುಂದಿನ ತಲೆಮಾರಿಗೆ ಯಕ್ಷಗಾನದ ಮೇಲೆ ಹೆಚ್ಚಿನ ಆಪ್ತತೆ ಬೆಳೆಯೋದಕ್ಕೆ ಸಹಕಾರಿ.
ಇದನ್ನೂ ಓದಿ: ತುಮಕೂರಿನ ನೂತನ ಕ್ಯಾನ್ಸರ್ ಆಸ್ಪತ್ರೆ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿರುವ ಸಿಎಂ