ಕುಂದಾಪುರ: ವಿದ್ಯಾರ್ಥಿಯೊಬ್ಬ ತನ್ನ ಐವರು ಸ್ನೇಹಿತರ ಜೊತೆ ಸಮುದ್ರಕ್ಕೆ ಈಜಲು ತೆರಳಿದ್ದು, ಸಮುದ್ರದ ನೀರಿನ ಸೆಳೆತಕ್ಕೆ ಸಿಕ್ಕು ಮುಳುಗಿ ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಕೊಡೇರಿ ಗಂಗೆಬೈಲು ಎಂಬಲ್ಲಿ ನಡೆದಿದೆ.
ತುಮಕೂರು ಮೂಲದ ಬಿಕಾಂ ವಿದ್ಯಾರ್ಥಿ ನಿರಂಜನ್ (17) ಎಂಬಾತ ಮೃತ ದುರ್ದೈವಿ. ಇತರ ನಾಲ್ವರನ್ನು ಸ್ಥಳೀಯ ಮೀನುಗಾರರು ಹರಸಾಹಸ ಮಾಡಿ ಬಚಾವ್ ಮಾಡಿದ್ದಾರೆ.
ಘಟನೆ ವಿವರ : ಮೃತ ನಿರಂಜನ್ ತನ್ನ ಸ್ನೇಹಿತನೊಬ್ಬನ ಅಜ್ಜಿ ಮನೆ ಕೊಡೇರಿಗೆ ಮಂಗಳವಾರ ಇತರ ಸಹಪಾಠಿಗಳ ಜೊತೆ ಬಂದಿದ್ದ. ಬುಧವಾರ ಮಧ್ಯಾಹ್ನದ ಸುಮಾರಿಗೆ ಐವರು ಕೂಡ ಕೊಡೇರಿ ಗಂಗೆಬೈಲು ರಾಮಭಜನಾ ಮಂದಿರ ಬಳಿ ಸಮುದ್ರಕ್ಕೆ ಹೋಗಿದ್ದು, ನೀರಿಗಿಳಿದಿದ್ದಾರೆ. ಆದರೆ, ನೀರಿನ ಸೆಳೆತಕ್ಕೆ ಸಿಕ್ಕು ಐವರು ಕೂಡ ಮುಳುಗಿದ್ದು, ಸಮೀಪದಲ್ಲಿಯೇ ಇದ್ದ ಮೀನುಗಾರರು ತೆರಳಿ ರಕ್ಷಣೆಗೆ ಮುಂದಾಗಿ ನಾಲ್ವರನ್ನು ರಕ್ಷಿಸಿ ದಡಕ್ಕೆ ತಂದಿದ್ದಾರೆ. ಆದರೆ, ನೀರಿನಲ್ಲಿ ಮುಳುಗಿ ಗಂಭೀರವಾಗಿದ್ದ ನಿರಂಜನ್ ಮೃತಪಟ್ಟಿದ್ದಾನೆ. ವಿದ್ಯಾರ್ಥಿಗಳೆಲ್ಲರೂ ಕೂಡಿ ಹಬ್ಬದ ನಿಮಿತ್ತ ತುಮಕೂರಿನಿಂದ ಊರಿಗೆ ಬಂದಿದ್ದರೆನ್ನಲಾಗಿದೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.