ಉಡುಪಿ: ಇಲ್ಲಿನ 76 ಬಡಗಬೆಟ್ಟು ಪಂಚಾಯತ್ ವ್ಯಾಪ್ತಿಯ ಅಲೆಂಬಿ ಎಂಬಲ್ಲಿ ಬುದ್ಧನ ಶಿಲ್ಪ ಪತ್ತೆಯಾಗಿರುವುದಾಗಿ ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜು ಪುರಾತತ್ವ ವಿಭಾಗ ಸಹಪ್ರಾಧ್ಯಾಪಕ ಪ್ರೊ. ಟಿ. ಮುರುಗೇಶಿ ತಿಳಿಸಿದ್ದಾರೆ.
ಪ್ರಾಚೀನ ಪಾಳುಬಿದ್ದ ದೇವಾಲಯದ ಪಕ್ಕದ ಬಾವಿಯಲ್ಲಿ ಕಳೆದ ಜ. 31 ರಂದು ಪ್ರಾಚೀನ ಜನಾರ್ದನ ಶಿಲ್ಪ ಪತ್ತೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಹೊರತೆಗೆದ ಪ್ರಾಚೀನ ವಸ್ತು ಅವಶೇಷಗಳ ಜೊತೆ ಅತ್ಯಂತ ಅಪರೂಪದ ಬುದ್ಧನ ಶಿಲ್ಪವೂ ಪತ್ತೆಯಾಗಿರುವುದು ತೀವ್ರ ಕುತೂಹಲವುಂಟುಮಾಡಿದೆ.
ಬುದ್ಧನ ಶಿಲ್ಪ ಕ್ರಿ.ಶ. 5ನೇ ಶತಮಾನದ ಗುಪ್ತ ಶೈಲಿಯಲ್ಲಿದ್ದು, ಸುಮಾರು 9 ಸೆ.ಮೀ. ಎತ್ತರ, 5 ಸೆ.ಮೀ. ಅಗಲ ಮತ್ತು 2 ಸೆ.ಮೀ. ದಪ್ಪ ಇದೆ. ಪದ್ಮಪೀಠದ ಮೇಲೆ ಪದ್ಮಾಸನ ಭಂಗಿಯಲ್ಲಿ ಕುಳಿತಿರುವ ಬುದ್ಧ, ತನ್ನ ಪ್ರಥಮ ಧರ್ಮೋಪದೇಶ ಮುದ್ರೆ ಅಥವಾ ಧರ್ಮಚಕ್ರ ಪ್ರವರ್ತನ ಮುದ್ರೆಯಲ್ಲಿದ್ದು, ಕಾವಿವಸ್ತ್ರ ಮತ್ತು ಕರ್ಣಕುಂಡಲ ಧರಿಸಿದ್ದಾನೆ. ತಲೆಯ ಮೇಲ್ಭಾಗದಲ್ಲಿ ಉಷ್ಣೀಶವಿದೆ. ತಲೆಯ ಹಿಂಭಾಗದಲ್ಲಿ ದುಂಡನೆಯ ಪ್ರಭಾವಳಿ ಇದ್ದು, ಅದರಲ್ಲಿ ಹೂ-ಲತೆಗಳ ಚಿತ್ತಾಕರ್ಷಕ ಕುಸುರಿ ಕೆಲಸವಿದೆ. ಮೇಲ್ಭಾಗದ ಎರಡೂ ತುದಿಗಳಲ್ಲಿ ಕಿರು ಯಕ್ಷ ಶಿಲ್ಪಗಳಿವೆ. ಹಿಂಬದಿಯ ಒರಗಿನ ಎರಡೂ ಬದಿಗಳಲ್ಲಿ ರೆಕ್ಕೆಗಳನ್ನು ಹೊಂದಿರುವ ಕುದುರೆಗಳ ಶಿಲ್ಪಗಳಿವೆ. ಇದು ಸಾರನಾಥ ಬುದ್ಧ ಶಿಲ್ಪದ ಪ್ರತಿಕೃತಿಯಂತಿದೆ ಎಂದು ಮುರುಗೇಶಿ ಅಭಿಪ್ರಾಯಪಟ್ಟಿದ್ದಾರೆ.
ಮೊಟ್ಟ ಮೊದಲ ಶಿಲ್ಪ:
ಈ ಶೈಲಿಯಲ್ಲಿ ದೊರೆತ ಮೊತ್ತಮೊದಲ ಪ್ರಾಚೀನ ಬೌದ್ಧ ಶಿಲ್ಪ ಇದಾಗಿದ್ದು, ಪರಂಪಾಗತ ನಂಬಿಕೆ ಪ್ರಕಾರ ತುಳುನಾಡು, ಪ್ರಾಚೀನ ಕಾಲದಲ್ಲಿ ಕದಂಬರ ಆಳ್ವಿಕೆಗೊಳಪಟ್ಟ ಪ್ರದೇಶವಾಗಿತ್ತು. ಕದಂಬರಿಗೂ ಗುಪ್ತರಿಗೂ ವೈವಾಹಿಕ ಸಂಬಂಧಗಳಿದ್ದುದು ಚಾರಿತ್ರಿಕವಾಗಿ ದಾಖಲಾಗಿದೆ.
ಅಲೆಂಬಿ ಸಮೀಪದಲ್ಲಿಯೇ ಕ್ರಿ.ಶ. 4- 5ನೇ ಶತಮಾನದ ಬ್ರಾಹ್ಮಿ ಲಿಪಿಯ ಶಾಸನ ಈ ಹಿಂದೆ ಪತ್ತೆಯಾಗಿತ್ತು ಎಂದೂ ಪ್ರೊ. ಮುರುಗೇಶಿ ಸ್ಮರಿಸಿದ್ದಾರೆ. ಸಂಶೋಧನೆಯಲ್ಲಿ ಗಣೇಶ್ ರಾಜ್ ಸರಳೇಬೆಟ್ಟು ಹಾಗೂ ಶಿರ್ವ ಕಾಲೇಜು ವಿದ್ಯಾರ್ಥಿಗಳಾದ ಶ್ರೇಯಸ್, ನಾಗರಾಜ್, ಗೌತಮ್, ರಾಜೇಶ್, ಹರ್ಷಿತಾ, ಕಾವ್ಯ, ಭವ್ಯ ಮತ್ತು ಗಣೇಶ್ ಸಹಕರಿಸಿದರು.