ತುಮಕೂರು: ಹಿರಿಯರೇ ಆಗಲಿ, ಕಿರಿಯರೇ ಆಗಲಿ ಮತದಾನ ಮಾಡಬೇಕು. ಮತದಾನ ಮಾಡುವುದರಿಂದ ದೇಶದ ಅಭಿವೃದ್ಧಿ ಸಾಧ್ಯವೆಂದು ಸಾಲುಮರದ ತಿಮ್ಮಕ್ಕ ಮತದಾರರಿಗೆ ಕಿವಿ ಮಾತನ್ನು ಹೇಳಿದರು.
ಜಿಲ್ಲಾ ಸ್ವೀಪ್ ಸಮಿತಿಯಿಂದ ವಿಶೇಷ ಚೇತನ ಮತದಾರರಿಗೆ ಜಾಗೃತಿ ಹಾಗೂ ಮತದಾನದ ಮಹತ್ವ ಕುರಿತು ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಿಮ್ಮಕ್ಕ,
ಹಿರಿಯರೇ ಆಗಲಿ, ಕಿರಿಯರೇ ಆಗಲಿ ಪ್ರತಿವೊಬ್ಬರು ಮತದಾನ ಮಾಡಬೇಕು. ನಾನು ಮತದಾನ ಮಾಡುತ್ತೇನೆ. ನೀವು ಮತದಾನ ಮಾಡಿ. ದೇಶದ ಬೆಳವಣಿಗೆಗೆ ಎಲ್ಲರೂ ಶ್ರಮಿಸೋಣ, ಎಲ್ಲರೂ ಮತ ಚಲಾಯಿಸಿ ಜೊತೆಗೆ ಪ್ರತಿವೊಬ್ಬರೂ ಗಿಡ ನೆಟ್ಟು, ಪರಿಸರ ಉಳಿಸಿ ಬೆಳೆಸುವ ಕಾರ್ಯ ಮಾಡಿ ಎಂದು ಕರೆ ನೀಡಿದರು.
ನಂತರ ಜಿಲ್ಲಾಧಿಕಾರಿ ಡಾ. ಕೆ ರಾಕೇಶ್ ಕುಮಾರ್ ಮಾತನಾಡಿ, ನಾವು ಮನೆಯಲ್ಲಿ ತಂದೆ- ತಾಯಿಯ ಮಾತು ಕೇಳದಿದ್ದರೂ ಅಜ್ಜಿಯ ಮಾತನ್ನು ಕೇಳುತ್ತೇವೆ. ಹಾಗೆಯೇ ಹಿರಿಯರಾದ ಸಾಲುಮರದ ತಿಮ್ಮಕ್ಕ ಅವರು ಹೇಳಿದಂತೆ ಎಲ್ಲರೂ ತಪ್ಪದೇ ಮತದಾನ ಮಾಡಬೇಕಿದೆ. ಜಿಲ್ಲೆಯಲ್ಲಿ 21 ಲಕ್ಷ ಮತದಾರರಿದ್ದು, ಎಲ್ಲರೂ ಮತ ಚಲಾಯಿಸಬೇಕು. ಇಂದು ಭಾರತದಲ್ಲಿ ಪ್ರಜಾಪ್ರಭುತ್ವ ಹೆಮ್ಮರವಾಗಿ ಬೆಳೆದಿದೆ. ಅದನ್ನು ಜವಾಬ್ದಾರಿಯುತವಾಗಿ ನಡೆಸಿಕೊಂಡು ಹೋಗಬೇಕಿದೆ ಎಂದರು.
ಜಿಲ್ಲಾ ಪಂಚಾಯತ್ ಸಿಇಒ ಶುಭಾ ಕಲ್ಯಾಣ್, ಜಿಲ್ಲೆಯಲ್ಲಿ ಒಟ್ಟು 1991 ಮತಗಟ್ಟೆಗಳಿದ್ದು, ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು. ಈ ಬಾರಿ ಹಿರಿಯ ನಾಗರಿಕರಿಗೆ, ವಿಶೇಷ ಚೇತನರಿಗೆ ಅವರ ಮನೆಯಿಂದ ಮತದಾನ ಕೇಂದ್ರದವರೆಗೂ ಉಚಿತ ವಾಹನ ಸೌಲಭ್ಯ ಒದಗಿಸಲಾಗುವುದು ಎಂದರು.