ತುಮಕೂರು: ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಎತ್ತಿನಹೊಳೆ ಕಾಮಗಾರಿ ಪ್ರಗತಿಯಲ್ಲಿರುವ ಸುತ್ತಮುತ್ತಲ ಪ್ರದೇಶಗಳಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ರೈತರ ಜಮೀನುಗಳಲ್ಲಿ ಸಂಗ್ರಹವಾಗಿದೆ.
ಜಿಲ್ಲೆಯ ಗುಬ್ಬಿ ತಾಲೂಕಿನ ಜಲಗುಣಿ ಗ್ರಾಮದ ಸಮೀಪ ಸುಮಾರು 4 ಎಕರೆ ಅಡಿಕೆ ತೋಟ ಸಂಪೂರ್ಣ ಜಲಾವೃತವಾಗಿದೆ. ಈ ಭಾಗದಲ್ಲಿ ಎತ್ತಿನಹೊಳೆ ಕಾಮಗಾರಿ ನಡೆಯುತ್ತಿರುವುದರಿಂದ ಸುಮಾರು 10 ಅಡಿ ಎತ್ತರದ ಮಣ್ಣಿನ ರಾಶಿ ಜಮೀನುಗಳ ಸಮೀಪ ಹಾಕಲಾಗಿದೆ. ಇದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗದೆ ಸಮೀಪದ ಅಡಿಕೆ ತೋಟಗಳಲ್ಲಿ ಸಂಗ್ರಹವಾಗಿದೆ.
ನಾಲ್ಕು ದಿನ ಹಾಗೆಯೇ ಬಿಟ್ಟರೆ ಅಡಿಕೆ ಗಿಡಗಳು ಕೊಳೆತು ಹೋಗುವ ಆತಂಕ ರೈತರದ್ದಾಗಿದೆ. ನೀರು ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ಎತ್ತಿನಹೊಳೆ ಕಾಮಗಾರಿ ನಡೆಸುತ್ತಿರುವ ಕಂಟ್ರಾಕ್ಟರ್ಗಳಿಗೆ ರೈತರು ಮನವಿ ಮಾಡಿದ್ದಾರೆ. ಆದರೆ, ಅವರು ಉದಾಸೀನ ತೋರಿಸುತ್ತಿದ್ದು, ಸ್ವಲ್ಪ ದಿನ ಬಿಟ್ಟು ಬಂದು ಮಣ್ಣಿನ ರಾಶಿ ತೆರವುಗೊಳಿಸುವುದಾಗಿ ಸಬೂಬು ಹೇಳುತ್ತಿದ್ದಾರೆ. ಇದರಿಂದ ರೈತರಿಗೆ ಸಮಸ್ಯೆಯಾಗುತ್ತಿದೆ.
ಇದನ್ನೂ ಓದಿ: ಸರ್ಕಾರಿ ಜಾಗಗಳಲ್ಲಿ 1400 ಕ್ಕೂ ಅಧಿಕ ಗಿಡ ಬೆಳೆಸಿದ ಪರಿಸರ ಪ್ರೇಮಿ ಮಂಜೇಗೌಡರು