ತುಮಕೂರು: ಜಿಲ್ಲೆಯಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು, ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಶಾಸಕ ಗೌರಿಶಂಕರ್ ನೇತೃತ್ವದಲ್ಲಿ ಗ್ರಾಮಸ್ಥರು ಸದಾಶಿವನಗರದಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಶಾಸಕ ಗೌರಿಶಂಕರ್, ತುಮಕೂರು ಗ್ರಾಮಂತರ, ಕುಣಿಗಲ್, ಗುಬ್ಬಿ ಪ್ರದೇಶಗಳಲ್ಲಿ ಕೆಲ ತಿಂಗಳಿನಿಂದ ಚಿರತೆ ಹಾವಳಿ ಹೆಚ್ಚಾಗಿದ್ದು, ಅವುಗಳನ್ನು ಬಂಧಿಸುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೆ ಅರಣ್ಯಾಧಿಕಾರಿಗಳು ಚಿರತೆಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದು, ಅಧಿಕಾರಿಗಳ ವೈಫಲ್ಯದಿಂದ ಮೂರು ಜನರು ಚಿರತೆ ದಾಳಿಗೆ ಬಲಿಯಾಗಿದ್ದಾರೆ. ಮುಂದಿನ 15 ದಿನಗಳೊಳಗೆ ಚಿರತೆಗಳನ್ನು ಸೆರೆ ಹಿಡಿಯಬೇಕು. ಇಲ್ಲವಾದಲ್ಲಿ ಅದರ ಮುಂದಿನ ಪರಿಣಾಮ ನೀವೇ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಡಿಎಫ್ಓ ಗಿರೀಶ್ ಮಾತನಾಡಿ, ಸತತವಾಗಿ 40 ದಿನಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದ್ದು, 20 ಬೋನುಗಳನ್ನಿಟ್ಟು ಚಿರತೆ ಹಿಡಿಯಲು ಪ್ರಯತ್ನ ಮಾಡಲಾಗುತ್ತಿದೆ. ಈ ಕುರಿತು ಹಿರಿಯ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡಲಾಗಿದ್ದು, ಬೇರೆ ರೀತಿಯ ಮಾರ್ಗಗಳನ್ನು ಅನುಸರಿಸಿ ಚಿರತೆ ಹಿಡಿಯುವ ಕಾರ್ಯ ಮಾಡುತ್ತೇವೆ. ಇನ್ನು ಚಿರತೆ ದಾಳಿಯಿಂದ ಮೃತಪಟ್ಟಿರುವವರ ಕುಟುಂಬದವರಿಗೆ ಏಳೂವರೆ ಲಕ್ಷ ಪರಿಹಾರ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಲಿದೆ ಎಂದು ತಿಳಿಸಿದರು.