ಬಾಗಲಕೋಟೆ: ತೋಟಗಾರಿಕೆ ಕ್ಷೇತ್ರದಲ್ಲಿ ಆದಂತಹ ವಿವಿಧ ಆವಿಷ್ಕಾರಗಳನ್ನು ಹಾಗೂ ತಂತ್ರಜ್ಞಾನಗಳನ್ನು ರೈತಾಪಿ ವರ್ಗಕ್ಕೆ ನೀಡಲು ಯೋಜನೆಗಳನ್ನು ರೂಪಿಸಲಾಗಿದೆ ಎಂದು ತೋಟಗಾರಿಕೆ ವಿವಿಯ ಕುಲಪತಿ ಡಾ. ಕೆ. ಎಂ. ಇಂದಿರೇಶ ತಿಳಿಸಿದರು.
ತೋಟಗಾರಿಕೆ ವಿವಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್ 19 ಲಾಕ್‍ಡೌನ್ ಹಿನ್ನಲೆ ರೈತರಿಗೋಸ್ಕರ ವಿನೂತನ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ವರ್ಗಾವಣೆ ಮಾಡಲು ಹಾರ್ಟವಾರ್ ರೂಮ್ ಸ್ಥಾಪನೆ ಮಾಡಿ ಆನ್‍ಲೈನ್ ಮೂಲಕ ರೈತರಿಗೆ ಸಲಹೆಗಳನ್ನು ನೀಡಲಾಗುತ್ತಿದೆ. ಕಿಸಾನ್ ಕಾಲ್ ಮೂಲಕ, ವಾಟ್ಸಾಪ್ ಮೂಲಕ ಆಯಾ ಬೆಳೆಗಳ ಮಾಹಿತಿ, ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗಿದೆ ಎಂದು ತಿಳಿಸಿದರು.
ರೈತರ ಸಹಭಾಗಿತ್ವದಲ್ಲಿ ಗ್ರಾಮ ಯೋಜನೆಯ ಮೂಲಕ ಉತ್ತಮ ಗುಣಮಟ್ಟದ ಬೀಜ ಉತ್ಪಾದನೆ ಮತ್ತು ಮಾರಾಟ ವ್ಯವಸ್ಥೆ, ರೈತ ಸ್ನೇಹಿ ಆನ್‍ಲೈನ್ ಕಾರ್ಯಕ್ರಮ, ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಉಚಿತ ಉದ್ಯಾನ ಸಹಾಯವಾಣಿ, 158 ರೈತರ ಉತ್ಪನ್ನಗಳಿಗೆ ಹಾಪ್‍ಕಾಮ್ಸ್ ಮೂಲಕ ಮಾರುಕಟ್ಟೆ, ರೈತರ ಮನೋಸ್ಥೈರ್ಯ ಅಭಿವೃದ್ದಿಗೆ ಪರಿಣಿತರ ಉಪಸ್ತಿತಿಯಲ್ಲಿ ಕಾರ್ಯಾಗಾರ ಆಯೋಜನೆ, ತಂತ್ರಾಂಶ ಆಧಾರಿತ ಸಲಹಾ ಸೇವೆಗಳ ಉದ್ಯಾನಮಿತ್ರ ಅಳವಡಿಕೆ ಹೀಗೆ ಹಲವಾರು ಯೋಜನೆಗಳನ್ನು ಸಾಕಾರಗೊಳಿಸಲಾಗಿದೆ ಎಂದರು.
ವಿಶ್ವವಿದ್ಯಾಲಯಕ್ಕೆ ಬೇಕಾಗುವ ಭೂಮಿಯನ್ನು ತಾತ್ಕಾಲಿಕವಾಗಿ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದಿಂದ ನವನಗರದಲ್ಲಿರುವ ಸೆಕ್ಟರ್ ನಂ.70, 1, 13, 41ಗಳನ್ನು ಲೀಸ್ ಪಡೆಯಲಾಗುವುದು. ಇನ್ನೂ ವಿಶ್ವವಿದ್ಯಾಲಯದ ಹಿಂಬಾಗದಲ್ಲಿರುವ 88 ಎಕರೆ ಜಮೀನನ್ನು ಜಿಲ್ಲಾಡಳಿತದಿಂದ ತೆಗೆದುಕೊಳ್ಳಲು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.