ತುಮಕೂರು: ಸರ್ಕಾರ ಆಡಳಿತ ಮಾಡುವುದರಲ್ಲಿ ವಿಫಲವಾಗಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಬೀದಿಗೆ ಬಂದು ಗಲಾಟೆ ಮಾಡಿಕೊಳ್ಳುತ್ತಿರುವ ಇಬ್ಬರು ಹಿರಿಯ ಅಧಿಕಾರಿಗಳನ್ನು ಕೂಡಲೇ ಸಸ್ಪೆಂಡ್ ಮಾಡಬಹುದಿತ್ತು. ಆದರೆ ಸರ್ಕಾರ ಅದನ್ನು ಮಾಡಿಲ್ಲ ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ ರೂಪಾ ಅವರನ್ನು ವರ್ಗಾವಣೆ ಮಾಡಿರುವ ಸರ್ಕಾರದ ನಿರ್ಧಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಹರಿಹಾಯ್ದಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಆಡಳಿತ ಮಾಡುವುದರಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿಯಾಗಿ ಒಳ್ಳೆ ಆಡಳಿತ ಕೊಡಲು ಒಂದು ಅವಕಾಶ ಸಿಕ್ಕಿತ್ತು. ಆದರೆ ಬೊಮ್ಮಾಯಿ ಅವರು ಅದರಲ್ಲಿ ವಿಫಲರಾಗಿದ್ದಾರೆ. ಇವತ್ತು ಇಬ್ಬರು ಅಧಿಕಾರಿಗಳು ಬೀದಿಯಲ್ಲಿ ಬಂದು ರಂಪಾಟ ಮಾಡಿಕೊಳ್ಳುತ್ತಿದ್ದಾರೆ ಎಂದರೆ ಎಲ್ಲೋ ಒಂದು ಕಡೆ ಅವರ ಮೇಲೆ ಸರ್ಕಾರದ ಹಿಡಿತ ಇಲ್ಲ ಎಂಬುದು ಅರ್ಥವಾಗುತ್ತಿದೆ ಎಂದು ದೂರಿದರು.
ಸರ್ಕಾರ ಬಿಗಿಯಾಗಿದ್ದಲ್ಲಿ, ಸರ್ಕಾರ ಯಾವುದೇ ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಳ್ಳುತ್ತಿದ್ದರೆ ಇಂತಹ ಸನ್ನಿವೇಶಗಳು ನಡೆಯುತ್ತಿರಲಿಲ್ಲ. ಇಬ್ಬರು ಅಧಿಕಾರಿಗಳನ್ನು ಕೂಡಲೇ ಸಸ್ಪೆಂಡ್ ಮಾಡಬೇಕಿತ್ತು. ಅವರನ್ನು ರಜಾದಲ್ಲಿ ಕಳುಹಿಸುವ ಬದಲು ಅವರನ್ನು ತಕ್ಷಣ ಸಸ್ಪೆಂಡ್ ಮಾಡುವ ಅಧಿಕಾರ ಸರ್ಕಾರಕ್ಕಿರುತ್ತದೆ. ಅದರ ನಂತರ ವಿಚಾರಣೆ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದು ಎಲ್ಲವನ್ನೂ ನಂತರ ಮಾಡಬಹುದು. ಸರ್ಕಾರ ತಕ್ಷಣ ಅವರನ್ನು ಸಸ್ಪೆಂಡ್ ಮಾಡಿ, ಸಬ್ಜೆಕ್ಟ್ ಟು ಎಂಕ್ವೈರಿ ಎಂದು ಮಾಡುವುದರಿಂದ ಯಾವುದೇ ತೊಂದರೆ ಆಗುತ್ತಿರಲಿಲ್ಲ. ಆ ಅವಕಾಶವಿದ್ದರೂ ಮಾಡಿಲ್ಲ. ಯಾಕೆ ಮಾಡಿಲ್ಲ ಎಂಬುದು ಗೊತ್ತಿಲ್ಲ. ನಾಯಕತ್ವದ ಗುಣಗಳಿಲ್ಲದ ಕಾರಣ ಆಡಳಿತ ವಿಫಲವಾಗಿದೆ ಎಂದು ಪರಮೇಶ್ವರ್ ಟೀಕಿಸಿದರು.
ಬಜೆಟ್ ಕುರಿತು ಮಾತನಾಡಿದ ಅವರು, ಅದು ಕೇವಲ ಚುನಾವಣಾ ಬಜೆಟ್. 3 ಲಕ್ಷ ಕೋಟಿ ಮೌಲ್ಯದ ಬಜೆಟ್ ಅನ್ನು ಬೊಮ್ಮಾಯಿ ಅವರು ಮಂಡಿಸಿದ್ದಾರೆ. ಅದು ಕೇವಲ ಸಂಖ್ಯೆಯ ಕಣ್ಕಟ್ಟು ಅಷ್ಟೇ, ಬೇರೇನೂ ಇಲ್ಲ. ಜನರಿಗೆ ಇದರಿಂದ ಯಾವುದೇ ಉಪಯೋಗ ಇಲ್ಲ. ಯಾಕೆಂದರೆ ಹೊಸ ಸರ್ಕಾರ ಆಡಳಿತಕ್ಕೆ ಬಂದರೆ ಇದ್ಯಾವುದು ಇರಲ್ಲ. ಹೊಸ ಸರ್ಕಾರ ಎಲ್ಲವನ್ನೂ ಬದಲಾವಣೆ ಮಾಡುತ್ತದೆ. ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಾವು ಖಂಡಿತವಾಗಿಯೂ ಅವುಗಳನ್ನೆಲ್ಲ ಬದಲಾವಣೆ ಮಾಡುತ್ತೇವೆ. ಇವರು ಹೇಳಿದ್ದನ್ನು ನಾವು ಯಾಕೆ ಮಾಡುತ್ತೇವೆ. ನಮಗೆ ನಮ್ಮದೇ ಆದಂತಹ ಬದ್ಧತೆಗಳು ಇವೆ, ನಮ್ಮದೇ ಆದಂತಹ ಕಾರ್ಯಕ್ರಮಗಳು ಇವೆ. ಅವುಗಳನ್ನು ನಾವು ಮಾಡುತ್ತೇವೆ. ಹಾಗಾಗಿ ಇದಕ್ಕೇನು ಅರ್ಥವಿಲ್ಲ, ಇದು ಮೀನಿಂಗ್ಲೆಸ್ ಬಜೆಟ್ ಎಂದು ಹೇಳಿದರು.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ ರೂಪಾ ಅವರು ಸಾರ್ವಜನಿಕವಾಗಿ ಮಾಧ್ಯಮಗಳ ಮೂಲಕ ಒಬ್ಬರ ಮೇಲೆ ಒಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡಿ ಸುದ್ದಿಯಾಗಿದ್ದರು. ಇಬ್ಬರ ಮೇಲೂ ರಾಜ್ಯ ಸರ್ಕಾರ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ, ಸೇವಾ ನಿಯಮಗಳನ್ನು ಉಲ್ಲಂಘಿಸದಂತೆ ಎಚ್ಚರಿಕೆಯನ್ನೂ ನೀಡಿತ್ತು. ಅದರ ಬೆನ್ನಲ್ಲೇ ಇಬ್ಬರ ಮೇಲೂ ಕಠಿಣ ಕ್ರಮ ಕೈಗೊಂಡಿರುವ ಸರ್ಕಾರ ಇಬ್ಬರನ್ನೂ ಸ್ಥಳ ನಿಯುಕ್ತಿಗೊಳಿಸದೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಸ್ಥಳ ನಿಯುಕ್ತಿಗೊಳಿಸದೇ ಡಿ.ರೂಪಾ, ರೋಹಿಣಿ ಸಿಂಧೂರಿ ವರ್ಗಾಯಿಸಿದ ಸರ್ಕಾರ