ತುಮಕೂರು : ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ವಿದ್ಯಾಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳು. ಜೊತೆಗೆ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಹಾಗೂ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಇಂದು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಂಬಂಧಪಟ್ಟ ಸದಸ್ಯರ ಸಭೆ ನಡೆಯಿತು. ಡಿಡಿಪಿಐ ಕಚೇರಿಯ ಸಂಭಾಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕಾಮಾಕ್ಷಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳ ಪೋಷಕರು, ಖಾಸಗಿ ಶಾಲೆಯ ಆಡಳಿತ ಮಂಡಳಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 37,317 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯುತ್ತಿದ್ದಾರೆ. ಯಾವ ವಿದ್ಯಾರ್ಥಿಗೂ ಸಹ ಪರೀಕ್ಷೆಗೆ ಹಾಜರಾಗಲು ತೊಂದರೆಯಾಗದಂತೆ ಸೂಕ್ತ ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಪರೀಕ್ಷಾ ಕೊಠಡಿಯೊಳಗೆ ಅಂತರ ಕಾಯ್ದುಕೊಂಡು ಪರೀಕ್ಷೆ ನಡೆಸಲು ಈಗಾಗಲೇ ಸೂಚನೆ ಬಂದಿದೆ. ಅದೇ ರೀತಿ ಪರೀಕ್ಷೆ ನಡೆಸಲಾಗುವುದು ಎಂದರು. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕುಡಿಯುವ ನೀರಿನ ವ್ಯವಸ್ಥೆ, ಸ್ಯಾನಿಟೈಸರ್, ಮಾಸ್ಕ್ ಹಾಗೂ ಬಸ್‌ನ ವ್ಯವಸ್ಥೆ ಮಾಡಲಾಗಿದೆ. ಶ್ರೀ ಸಿದ್ದಗಂಗಾ ಮಠದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅಲ್ಲಿಯೇ ಪರೀಕ್ಷೆ ನಡೆಸಲು ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ತಿಳಿಸಿದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪೋಷಕರಿಗೆ ಮಕ್ಕಳನ್ನು ಪರೀಕ್ಷೆಗೆ ಕಳುಹಿಸಲು ಮಾನಸಿಕ ಸ್ಥೈರ್ಯ, ಆತ್ಮವಿಶ್ವಾಸ ಹೆಚ್ಚಿಸುವಂತಹ ಕಾರ್ಯಕ್ರಮವನ್ನು ರೂಪಿಸಿ, ಶಾಲೆಗಳನ್ನು ಮುಚ್ಚಿ ತಿಂಗಳುಗಳೇ ಕಳೆದಿರುವುದರಿಂದ ಪರೀಕ್ಷೆ ನಡೆಯುವ ಕೊಠಡಿಗಳ ಶುಚಿತ್ವ ಹಾಗೂ ಶೌಚಾಲಯದ ವ್ಯವಸ್ಥೆಯ ಬಗ್ಗೆ ಗಮನವಹಿಸಿ. ಅಲ್ಲದೆ ಶಿಕ್ಷಕರಿಗೆ ಅವರ ವಾಸಸ್ಥಳಕ್ಕೆ ಸಮೀಪವಾಗುವಂತಹ ಪರೀಕ್ಷಾ ಕೇಂದ್ರಗಳನ್ನು ನಿಯೋಜನೆ ಮಾಡಿ ಎಂಬ ವಿವಿಧ ಬೇಡಿಕೆಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.