ತುಮಕೂರು : ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ನಿಯಂತ್ರಣಕ್ಕಾಗಿ ಎಲ್ಲಾ ಸಮುದಾಯದವರ ಸಹಭಾಗಿತ್ವ ಮತ್ತು ಸಹಕಾರ ಅತ್ಯವಶ್ಯಕವಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಮುಸ್ಲಿಂ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ಒಂದಾಗಿರುವ ತುಮಕೂರಿನಲ್ಲಿಯೂ ದಿನೇ ದಿನೆ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ರಂಜಾನ್ ಹಬ್ಬದಲ್ಲಿ ಮುಸ್ಲಿಂ ಬಾಂಧವರು ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್ ಹಾಕಿಕೊಳ್ಳುವುದು ಮತ್ತು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವಯಸ್ಸಾದವರು ಅನವಶ್ಯಕವಾಗಿ ಹೊರಗಡೆ ಬರಬಾರದು ಎಂದು ತಿಳಿಸಿದರು.
ರಂಜಾನ್ ಸಮಯದಲ್ಲಿ ಉಪವಾಸದ ಆಚರಣೆ ರೂಢಿಯಲ್ಲಿದ್ದು, ಈ ಸಂದರ್ಭದಲ್ಲೂ ಲಸಿಕೆ ಹಾಕಿಸಿಕೊಳ್ಳಲಿಚ್ಛಿಸುವವರಿಗೆ ಲಸಿಕೆ ಹಾಕಿಸಬೇಕು. ಈ ನಿಟ್ಟಿನಲ್ಲಿ ಮುಸ್ಲಿಂ ಮುಖಂಡರು ತಮ್ಮ ಸಮುದಾಯದಲ್ಲಿ ಜಾಗೃತಿ ಮೂಡಿಸಿ ಕೋವಿಡ್ ನಿಯಂತ್ರಣಕ್ಕೆ ಕೈಜೋಡಿಸಬೇಕು. ಕೋವಿಡ್ ಲಕ್ಷಣ ಕಂಡು ಬಂದ ತಕ್ಷಣ ಅಂತಹವರನ್ನು ಪರೀಕ್ಷೆಗೊಳಪಡಿಸಿ ಚಿಕಿತ್ಸೆಗೆ ದಾಖಲಿಸಬೇಕಲ್ಲದೆ 45 ವರ್ಷ ಮೇಲ್ಪಟ್ಟವರೆಲ್ಲರಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಅರಿವು ಮೂಡಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ ಮಾತನಾಡಿ, ಕಳೆದ 2019ನೇ ವರ್ಷದಲ್ಲಿ ಇದೇ ಸಮಯದಲ್ಲಿ ಕೊರೊನಾ ಹರಡಿತ್ತು. ಆ ಸಂದರ್ಭದಲ್ಲೂ ಮುಸ್ಲಿಂ ಬಾಂಧವರು ಕೋವಿಡ್ ನಿಯಂತ್ರಣಕ್ಕೆ ಸಹಕರಿಸಿದ್ದು, ಅದರಂತೆಯೇ ಈ ವರ್ಷವೂ ಸಹಕರಿಸಬೇಕು. ರಂಜಾನ್ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಎಲ್ಲಾ ಮಸೀದಿಗಳಿಗೂ ಇಲಾಖೆಯಿಂದ ರವಾನಿಸಲಾಗುವುದು. ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಹೇಳಿದರು. ಸಭೆಯಲ್ಲಿ ಮಾಜಿ ಶಾಸಕ ಶಫಿ ಅಹಮದ್, ತುಮಕೂರು ಜಿಲ್ಲಾ ವಕ್ಪ್ ಸಮಿತಿ ಅಧ್ಯಕ್ಷ ಮುಸ್ತಫ್ ಅಹಮದ್, ಪಾಲಿಕೆ ಸದಸ್ಯ ನಯಾಜ್ ಹಾಜರಿದ್ದರು.
ಓದಿ : ಕೋವಿಡ್ ಸಾವು : ವಾಸ್ತವ ಪ್ರಕರಣ ಮತ್ತು ಸರ್ಕಾರದ ಅಂಕಿ ಅಂಶದಲ್ಲಿ ಭಾರಿ ವ್ಯತ್ಯಾಸ!