ತುಮಕೂರು: ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬುದನ್ನು ಮರೆತು ಬಿಜೆಪಿ ಸರ್ಕಾರ, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ರಾಮಕೃಷ್ಣ ಕಿಡಿ ಕಾರಿದರು. ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ವೋಟ್ ಬ್ಯಾಂಕಿಗಾಗಿ ರಾಜಕಾರಣ ಮಾಡಲು ಬಿಜೆಪಿ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಾ.ಜಿ ಪರಮೇಶ್ವರ್ ಅವರ ವಿರುದ್ಧ ಮಾಜಿ ಶಾಸಕ ಕೆ ಎನ್ ರಾಜಣ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜಣ್ಣನವರು ಜನರ ಬಳಿ ಹೋಗಿ ನಾನು ಮುಂದೆ ಯಾವುದೇ ಪಕ್ಷದಿಂದ ಅಥವಾ ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ನೀವು ನನಗೆ ಬೆಂಬಲಿಸಬೇಕು ಎನ್ನುತ್ತಿದ್ದಾರೆ. ಇದರ ಅರ್ಥ ಅವರು ಈಗಾಗಲೇ ಬೇರೆ ಪಕ್ಷದಿಂದ ಕಣಕ್ಕಿಳಿಯಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ನಾನು ಕೊರಟಗೆರೆಗೆ ಹೋಗಿ ಪ್ರಚಾರ ಮಾಡಿ, ಡಾ. ಜಿ ಪರಮೇಶ್ವರ್ ಅವರನ್ನು ಗೆಲ್ಲಿಸಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ, ಮಧುಗಿರಿ ಕ್ಷೇತ್ರದಲ್ಲಿ ಸೋತಿರುವುದನ್ನು ಅವರು ಮರೆಯಬಾರದು ಎಂದರು. ಸ್ನೇಹಿತ ಎನ್ನುವ ದೃಷ್ಟಿಯಿಂದ ಕೆ ಎನ್ ರಾಜಣ್ಣ ಅವರಿಗೆ ಸ್ಪರ್ಧಿಸಲು, ಪರಮೇಶ್ವರ್ 3 ಬಾರಿ ಟಿಕೆಟ್ ಕೊಡಿಸಿದ್ದಾರೆ. ಇದನ್ನು ರಾಜಣ್ಣ ನೆನಪಿನಲ್ಲಿ ಇಟ್ಟುಕೊಂಡು ಮಾತನಾಡಬೇಕು ಎಂದರು.
ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಸ್ಸೋಂ, ಮಿಜೋರಾಂ, ಮೇಘಾಲಯ, ಸಿಕ್ಕಿಂ, ಅರುಣಾಚಲ ಪ್ರದೇಶಗಳು ಬೆಂಕಿ ಹತ್ತಿಕೊಂಡು ಉರಿಯುತ್ತಿವೆ ಎಂದರು.
ದೆಹಲಿಯಲ್ಲಿ ಕುಳಿತುಕೊಂಡು ಪ್ರಧಾನಿ ಟ್ವೀಟ್ ಮಾಡುವ ಮೂಲಕ, ನಿಮ್ಮ ಜೊತೆ ಬಿಜೆಪಿ ಪಕ್ಷವಿದೆ. ನಿಮ್ಮೆಲ್ಲರ ಕ್ಷೇಮಾಭಿವೃದ್ಧಿಯನ್ನು ನಾವು ನೋಡಿಕೊಳ್ಳುತ್ತೇವೆ. 8 ರಾಜ್ಯಗಳ ಜವಾಬ್ದಾರಿ ನನ್ನದು ಎಂದು ಹೇಳುತ್ತಾರೆ. ಆದರೆ, ಆ ರಾಜ್ಯಗಳಲ್ಲಿ ಇಂಟರ್ನೆಟ್ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ. ಇದು ಮೋದಿಯವರಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದರು.