ಬೆಂಗಳೂರು: ತುಮಕೂರಿನಲ್ಲಿ ಮಹಿಳೆ ಮತ್ತು ನವಜಾತ ಶಿಶುಗಳ ಸಾವು ಪ್ರಕರಣವನ್ನು ಸಚಿವೆ ಶಶಿಕಲಾ ಜೊಲ್ಲೆ ಖಂಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ತುಮಕೂರಿನಲ್ಲಿ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಲು ನಿರಾಕರಿಸಿದ ಕಾರಣ ತಾಯಿ ಮತ್ತು ನವಜಾತ ಶಿಶುಗಳು ಸಾವಿಗೀಡಾಗಿರುವ ಬಗ್ಗೆ ಪ್ರತಿಕ್ರಿಯಿಸಿದರು. ಈ ಘಟನೆ ನಿಜಕ್ಕೂ ನೋವಿನ ಸಂಗತಿ. ಈ ಬಗ್ಗೆ ತನಿಖೆ ಆಗಬೇಕು ಎಂದು ಸಚಿವೆ ಹೇಳಿದರು.
ಇದನ್ನೂ ಓದಿ: ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ 142 ಕೋಟಿ ರೂ ಅನುದಾನ: ಸಚಿವೆ ಶಶಿಕಲಾ ಜೊಲ್ಲೆ
ಯಾರಿಂದ ತಪ್ಪಾಗಿದೆ ಅಂತ ತನಿಖೆ ಮಾಡಿ. ಯಾರೇ ಆಗಿದ್ದರೂ ಕ್ರಮ ತೆಗೆದುಕೊಳ್ಳಿ. ಆಸ್ಪತ್ರೆಯ ಬೇಜವಬ್ದಾರಿ ಆಗಿದ್ದರೂ ಕಠಿಣ ಕ್ರಮ ಆಗಬೇಕು ಎಂದು ಆಗ್ರಹಿಸಿದರು.
ತಾಯಿ ಕಾರ್ಡ್, ಆಧಾರ್ ಕಾರ್ಡ್ ಇಲ್ಲ ಎಂದು ಹೇಳಿ ತುಮಕೂರು ಜಿಲ್ಲಾಸ್ಪತ್ರೆಯವರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗರ್ಭಿಣಿ ಮನೆಯಲ್ಲಿ ರಾತ್ರಿಯಿಡೀ ಹೆರಿಗೆ ನೋವಿನಿಂದ ಬಳಲಿ ಮೃತಪಟ್ಟಿರುವ ದಾರುಣ ಘಟನೆ ನಡೆದಿತ್ತು.
ಕಸ್ತೂರಿ ಬಳಿ ತಾಯಿ ಕಾರ್ಡ್, ಆಧಾರ್ ಕಾರ್ಡ್ ಇಲ್ಲ ಎಂದು ಆಸ್ಪತ್ರೆಯವರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು ಎಂದು ಹೇಳಲಾಗ್ತಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಬರೆದುಕೊಡುತ್ತೇವೆ, ಅಲ್ಲಿಗೆ ಹೋಗಿ ಎಂದು ವೈದ್ಯೆಯೊಬ್ಬರು ಹೇಳಿದ್ದರಂತೆ. ಅಲ್ಲಿಗೆ ಹೋಗಲು ಹಣ ಇಲ್ಲದೇ ಕಸ್ತೂರಿ ನೋವಿನಲ್ಲೇ ವಾಪಸ್ ಮನೆಗೆ ಹಿಂತಿರುಗಿದ್ದರು ಎಂದು ತಿಳಿದುಬಂದಿದೆ.
ಮನೆಯಲ್ಲಿ ರಾತ್ರಿಯಿಡೀ ಹೆರಿಗೆ ನೋವಿನಿಂದ ಬಳಲಿದ ಕಸ್ತೂರಿ ಇಂದು ಬೆಳಗಿನ ಜಾವ ಜೋರಾಗಿ ಚೀರಾಡಿದ್ದಾರೆ. ಸ್ಥಳೀಯರು ಸ್ಥಳಕ್ಕೆ ಹೋಗುವಷ್ಟರಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿ, ತೀವ್ರ ರಕ್ತಸ್ರಾವವಾಗಿ ಕೊನೆಯುಸಿರೆಳೆದಿದ್ದಾರೆ. ಇತ್ತ, ಹುಟ್ಟಿದ ಅವಳಿ ಮಕ್ಕಳು ಕೂಡ ಮೃತಪಟ್ಟಿದ್ದವು. ಈ ಘಟನೆ ಈಗ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ.
ಇದನ್ನು ಓದಿ: ತಾಯಿ ಕಾರ್ಡ್ ಇಲ್ಲವೆಂದು ಜಿಲ್ಲಾಸ್ಪತ್ರೆಗೆ ದಾಖಲಿಸಿಕೊಳ್ಳದ ಆರೋಪ: ರಕ್ತ ಸ್ರಾವದಿಂದ ಬಾಣಂತಿ.. ಹುಟ್ಟಿದ ಅವಳಿ ಮಕ್ಕಳ ಸಾವು