ತುಮಕೂರು: ಹಲವಾರು ದಿನಗಳಿಂದ ಜನರು ಹಾಗೂ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆಯು, ಇಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.
ಕುಣಿಗಲ್ ತಾಲೂಕಿನ ಕಟ್ಟೆಪಾಳ್ಯ ಗ್ರಾಮದ ಬಳಿ ಇರಿಸಲಾಗಿದ್ದ ಬೋನಿನಲ್ಲಿ ಸುಮಾರು ನಾಲ್ಕು ವರ್ಷದ ಹೆಣ್ಣು ಚಿರತೆ ಸೆರೆಯಾಗಿದೆ.
ಮಹಿಳೆ ಚಿರತೆಗೆ ಬಲಿಯಾಗಿದ್ದ ಸ್ಥಳದ ಸಮೀಪವೇ, ಕೊಟ್ಟಿಗೆ ಆಕಾರದ ಬೋನನ್ನು ಇರಿಸಲಾಗಿತ್ತು. ಬಳಿಕ ಅಲ್ಲಿಗೆ ಬಂದ ಚಿರತೆಯು ಬೋನಿಗೆ ಬಿದ್ದಿದೆ. ಇಲಾಖೆಯ ತಜ್ಞರ ಸಹಾಯದಿಂದ ಚಿರತೆಯನ್ನು ಪ್ರಜ್ಞೆ ತಪ್ಪಿಸಿ, ನಂತರ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.