ತುಮಕೂರು: ಪಾವಗಡ ತಾಲೂಕಿನ ಪೆಮ್ಮನ ಹಳ್ಳಿ ಗ್ರಾಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಕಚೇರಿ, ಶಿಕ್ಷಣಾ ಇಲಾಖೆ ಹಾಗೂ ತಾಲೂಕು ಪಂಚಾಯ್ತಿ ಮತ್ತು ಪೋಲಿಸ್ ಇಲಾಖೆ ಪಾವಗಡ ವತಿಯಿಂದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಾಧೀಶರಾದ ಜಗದೀಶ್ ಬೀಸೆರೊಟ್ಟಿ ಅವರು, ನಮ್ಮ ಸಂಪ್ರದಾಯ ಸಂಸ್ಕೃತಿಯನ್ನು ಪಾಲಿಸೋಣ, ಸಾಮಾಜಿಕವಾಗಿ ನಾವು ಒಂದಾಗಿ ಬಾಳ ಬೇಕಾಗಿದೆ ಹಾಗೂ ಗ್ರಾಮದಲ್ಲಿ ಇಲಾಖೆಗಳು ಸ್ಪಂದಿಸುತ್ತಿಲ್ಲ, ಶುದ್ದ ಕುಡಿಯುವ ನೀರಿಲ್ಲ, ಆಸ್ಪತ್ರೆ ಕಾರ್ಯನಿರ್ವಹಿಸುತ್ತಿಲ್ಲ, ಶಾಲೆಗೆ ಬೇಕಾದ ಸೌಲಭ್ಯಗಳಿಗೆ ನಮ್ಮ ನ್ಯಾಯಾಲಯದಲ್ಲಿರುವ ಕಾನೂನು ಸೇವಾ ಸಮಿತಿಗೆ ಅರ್ಜಿ ನೀಡಿದರೆ ನಿಮ್ಮ ಸಮಸ್ಯೆಗಳಿಗೆ ಕಾನೂನು ಸೇವಾ ಸಮಿತಿ ಸಮಸ್ಯೆಗಳನ್ನು ಬಗೆಹರಿಸಲಿದೆ ಎಂದರು.
ಪ್ರತಿ ತಿಂಗಳು ತಾಲೂಕಿನ ಎರಡು ಗ್ರಾಮದಲ್ಲಿ ಕಾನೂನು ಅರಿವು ನೆರವಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅಪರಾಧ ಮತ್ತು ಸಿವಿಲ್ ವ್ಯಾಜ್ಯಗಳ ಹೆಚ್ಚಳವನ್ನು ತಡೆಯುವ ಸಲುವಾಗಿ ಪ್ರತಿ ತಿಂಗಳು ಜನರ ಬಳಿಯೇ ಕಾನೂನು ಅರಿವು ಕಾರ್ಯಕ್ರಮ ನಡೆಸಿ , ಕಾನೂನು ಅರಿವಿನ ಕೊರತೆಯನ್ನು ನೀಗಿಸಲಾಗುತ್ತಿದೆ ಎಂದರು.