ತುಮಕೂರು: ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಡುಗೆ ತೈಲ ತುಂಬಿದ ಟ್ಯಾಂಕರ್ ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ಗುಬ್ಬಿ ತಾಲೂಕು ಸೋಮಲಾಪುರ ಗ್ರಾಮದ ಬಳಿ ನಡೆದಿದೆ.
ಪೂನಾದಿಂದ ನಂಜನಗೂಡಿಗೆ ಹೋಗುತ್ತಿದ್ದ ಟ್ಯಾಂಕರ್ ಚಾಲಕನಿಗೆ ರಸ್ತೆ ಬದಿ ಗುಂಡಿಯಲ್ಲಿ ಮಳೆ ನೀರು ತುಂಬಿಕೊಂಡಿದ್ದು, ಸರಿಯಾಗಿ ಗೋಚರಿಸಿಲ್ಲ, ಹೀಗಾಗಿ ಟ್ಯಾಂಕರ್ ರಸ್ತೆ ಪಕ್ಕಕ್ಕೆ ಹೊರಳಿ ಕಂಬಕ್ಕೆ ಡಿಕ್ಕಿ ಹೊಡೆದಿದೆ. ನೋಡನೋಡುತ್ತಿದ್ದಂತೆ ಟ್ಯಾಂಕರ್ಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
ಅಪಘಾತದಲ್ಲಿ ಚಾಲಕನ ತಲೆಗೆ ಪೆಟ್ಟು ಬಿದ್ದಿದ್ದು, ಚಿಕಿತ್ಸೆಗಾಗಿ ಗುಬ್ಬಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಚೇಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.