ತುಮಕೂರು: ಸಮಾಜಮುಖಿಯ ಅಭಿವೃದ್ಧಿಗಾಗಿ ಭಾರತ ನಿಮ್ಮ ಹುಡುಕಾಟದಲ್ಲಿದೆ. ಪದವಿ ಪಡೆದ ನೀವೆಲ್ಲರೂ ದೇಶದ ಆರ್ಥಿಕ ಬೆಳವಣಿಗೆಗೆ ಶ್ರಮಿಸುವ ಮೂಲಕ ಉತ್ತಮ ಪ್ರಜೆಗಳಾಗಿ ತಮ್ಮ ವೃತ್ತಿ ಬದುಕಿನಲ್ಲಿ ಸಾಧನೆಯ ಹಾದಿಯಲ್ಲಿ ಸಾಗಿ ಎಂದು ವಿದ್ಯಾರ್ಥಿಗಳಿಗೆ ಸಿದ್ದಗಂಗಾ ಮಠದ ಮಠಾಧ್ಯಕ್ಷ ಹಾಗೂ ಎಸ್ಐಟಿ ಆಡಳಿತ ಮಂಡಳಿಯ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ನಗರದ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹತ್ತನೇ ಘಟಿಕೋತ್ಸವ ಕಾರ್ಯಕ್ರಮ ನಡೆಯಿತು. ಇದರಲ್ಲಿ ಒಟ್ಟು 75 ಎಂಬಿಎ 64 ಎಂಸಿಎ 81 ಎಂಟೆಕ್ 968 ಇಂಜಿನಿಯರಿಂಗ್ ಹಾಗೂ 60 ಆರ್ಕಿಟೆಕ್ಚರ್ ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ಮತ್ತು ಸಿದ್ದಲಿಂಗ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಈ ಒಂದು ಸಂದರ್ಭ ಅತ್ಯಂತ ಮಹತ್ವವಾದದ್ದು, ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ನನ್ನ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ದೇಶವು ಅಭಿವೃದ್ಧಿಯ ಹಾದಿಯಲ್ಲಿ ಸಾಗುವಂತಹ ಕಾರ್ಯ ಮಾಡಬೇಕಿದೆ. ಭಾರತ ದೇಶ ನಿಮ್ಮಂತಹ ಯುವ ಪ್ರತಿಭೆಗಳ ಹುಡುಕಾಟದಲ್ಲಿದೆ. ವಿದ್ಯಾರ್ಥಿಗಳು ದೇಶದ ಆರ್ಥಿಕ ಬೆಳವಣಿಗೆಗೆ ಶ್ರಮಿಸುವ ಉತ್ತಮ ಪ್ರಜೆಗಳಾಗಿ ವೃತ್ತಿಬದುಕಿನಲ್ಲಿ ಸಾಧನೆಯ ಹಾದಿಯಲ್ಲಿ ಸಾಗಿ ಎಂದು ಸಲಹೆ ನೀಡಿದರು.
ನಂತರ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿ ಮಾತನಾಡಿದ ಮೈಕ್ರೋ ಎಲೆಕ್ಟ್ರಾನಿಕ್ ಡಿವೈಸಸ್ ಅಂಡ್ ಕಂಪ್ಯುಟೇಷನ್ ಸಿಸ್ಟಮ್ಸ್‌ನ ನಿರ್ದೇಶಕ ಡಾ. ಸುಧೀರ್ ಕಾಮತ್, ಕಾಲೇಜಿನಲ್ಲಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆಯುವುದು ಸುಲಭದ ಮಾತಲ್ಲ. ನಿಮ್ಮ ಜೀವನದ ಮೊದಲನೇ ಸಾಧನೆಯ ಮೆಟ್ಟಿಲು ಇದಾಗಿದೆ. ಶಿಕ್ಷಣದ ನಂತರ ಉದ್ಯೋಗದಲ್ಲಿ ಸಾಕಷ್ಟು ಸವಾಲುಗಳು ಮತ್ತು ಅವಕಾಶಗಳು ಎದುರಾಗುತ್ತವೆ, ಅವುಗಳನ್ನು ಧೈರ್ಯವಾಗಿ ಎದುರಿಸುವ ಮೂಲಕ ಸುಂದರ ಜೀವನವನ್ನು ಕಟ್ಟಿಕೊಳ್ಳಿ. ಇಲ್ಲಿಯವರೆಗೂ ವಿದ್ಯಾಭ್ಯಾಸದಲ್ಲಿ ತೋರಿದ ಶ್ರದ್ಧೆ ಮತ್ತು ಆಸಕ್ತಿಯನ್ನು ವೃತ್ತಿಯಲ್ಲಿಯೂ ಮುಂದುವರೆಸುವ ಮೂಲಕ ಸಾಧನೆಯ ಹಾದಿಯಲ್ಲಿ ಮುಂದುವರೆಯಿರಿ ಎಂದರು.
ಹೈದರಾಬಾದ್ ಮೂಲದ ವಿದ್ಯಾರ್ಥಿ ಎಸ್.ವಿಶಾಲ್ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಮೊದಲ ರ್ಯಾಂಕ್ ಗಳಿಸುವ ಮೂಲಕ ಡಾ. ಶಿವಕುಮಾರ ಸ್ವಾಮೀಜಿ ಪದಕ ಸೇರಿದಂತೆ ಒಟ್ಟು 7 ಚಿನ್ನದ ಪದಕ ಪಡೆದರು. ಈ ವೇಳೆ ಮಾತನಾಡಿದ ವಿಶಾಲ್, ಕಾಲೇಜಿನಲ್ಲಿರುವ ಶಿಸ್ತು, ಸಂಯಮ, ಉತ್ತಮ ವಾತಾವರಣದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಇನ್ನೂ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಟೆಕ್ಸಾಸ್ ಆಫ್ ಯುನಿವರ್ಸಿಟಿಗೆ ಸೇರಲಿದ್ದು, ಆ ಮೂಲಕ ತನ್ನಲ್ಲಿರುವ ಕೌಶಲ್ಯತೆ ಮತ್ತು ಶಿಕ್ಷಣ ಮಟ್ಟವನ್ನು ಹೆಚ್ಚಿಸಿಕೊಂಡು ವಿದ್ಯಾಭ್ಯಾಸ ಪೂರ್ಣಗೊಂಡ ನಂತರ ಭಾರತಕ್ಕೆ ಬಂದು ದೇಶದ ಆರ್ಥಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತೇನೆ ಎಂದರು.