ತುಮಕೂರು: ಶ್ರೀಕೃಷ್ಣನ ಮತ್ತೊಂದು ಹೆಸರೇ ಜನಾರ್ದನ. ಹಾಗಾಗಿ ಜನರ ಸೇವೆ ಮಾಡುವ ಮೂಲಕಜನಾರ್ದನನ ಕೃಪೆಗೆ ಪಾತ್ರರಾಗಬೇಕೆಂದು ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಪರಂಪರೆಯಲ್ಲಿ ಶ್ರೀಕೃಷ್ಣನಿಗೆ ಪ್ರಮುಖ ಸ್ಥಾನ ನೀಡಲಾಗಿದೆ. ಧರ್ಮ ಸಂಸ್ಥಾಪನೆಗೆ, ಅಧರ್ಮ ಹೆಚ್ಚಾದಾಗ ಮತ್ತೆ ಮತ್ತೆ ಹುಟ್ಟಿ ಬರುತ್ತೇನೆ ಎಂದು ಹೇಳಿದ ಶ್ರೇಷ್ಠ ದೇವರು. ಮನುಷ್ಯರಿಗೆ ಕರ್ಮ ಫಲವನ್ನು ಬೋಧಿಸಿ, ಮನುಷ್ಯರು ಮಾಡಬೇಕಿರುವ ಕಾಯಕವೇ ಅವರವರ ಧರ್ಮ ಎಂದು ಬೋಧಿಸಿದಾತ.
ಭಗವದ್ಗೀತೆಯ ಮೂಲಕ ಇಡೀ ಭಾರತೀಯ ಪರಂಪರೆಗೆ ನೆಲೆಯನ್ನು ಒದಗಿಸಿಕೊಟ್ಟಿದ್ದು ಭಗವಂತ ಶ್ರೀ ಕೃಷ್ಣ. ಅವನ ಬೋಧನೆಗಳ ಮೂಲಕ ಸಮಾಜ ಮುಂದೆ ಹೋಗುವುದರ ಜೊತೆಗೆ ಅಧರ್ಮವನ್ನು ಮಟ್ಟ ಹಾಕಬೇಕಿದೆ ಎಂದು ಗೀತೋಪದೇಶದ ಮೂಲಕ ತಿಳಿಸಿ ಕೊಟ್ಟವರು.
ಶ್ರೀಕೃಷ್ಣನ ಮತ್ತೊಂದು ಹೆಸರೇ ಜನಾರ್ದನ ಜನರ ಸೇವೆ ಮಾಡುವುದೇ ಜನಾರ್ದನನ ಸೇವೆ, ಗುಡಿಗಳಲ್ಲಿ ಮಾತ್ರ ದೇವರಿಲ್ಲ ಎಲ್ಲರ ಆತ್ಮದಲ್ಲಿಯೂ ದೇವರಿದ್ದಾನೆ ಹಾಗಾಗಿ ಎಲ್ಲರನ್ನು ದೇವರ ರೀತಿಯಲ್ಲಿ ಕಾಣುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಮುಂದಾಗೋಣ ಎಂದರು.