ತುಮಕೂರು: ಬಯಲುಸೀಮೆಯ ಕಲ್ಪವೃಕ್ಷ ಕಾಮಧೇನು ಎಂದೇ ಕರೆಸಿಕೊಳ್ಳುವ ಹುಣಸೆಹಣ್ಣಿಗೆ ಈ ಬಾರಿ ಮಾರುಕಟ್ಟೆಯಲ್ಲಿ ಗಣನೀಯ ಪ್ರಮಾಣದಲ್ಲಿ ದರ ಕುಸಿದುಹೋಗಿದ್ದು, ರೈತರು ಕಂಗಾಲಾಗಿದ್ದಾರೆ. ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ, ಗ್ರಾಮಾಂತರ ಭಾಗದಲ್ಲಿ ಯಥೇಚ್ಚವಾಗಿ ಹುಣಸೆಹಣ್ಣು ಬೆಳೆಯಲಾಗುತ್ತದೆ.
ಹುಣಸೆ ಬೆಳೆಯ ಬೀಜ, ಹಿಪ್ಪೆ, ನಾರು, ತೊಗಟೆ ಸಂಪೂರ್ಣ ಬಳಕೆಗೆ ಉಪಯೋಗಿಸಲ್ಪಡುತ್ತದೆ. ಆದರೆ, ಈ ಬಾರಿ ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ ಕೇವಲ 9 ಸಾವಿರ ರೂ. ಲಭಿಸುತ್ತಿದೆ. ಕಳೆದ ವರ್ಷ ಇದೇ ಗುಣಮಟ್ಟದ ಹುಣಸೆಹಣ್ಣು ಕ್ವಿಂಟಲ್ ಗೆ 28 ಸಾವಿರದಿಂದ 30 ಸಾವಿರದವರೆಗೆ ಸಿಗುತ್ತಿತ್ತು.
ಒಂದು ಮರಕ್ಕೆ 1500 ರೂ. ನಿಂದ 2000 ರೂ. ಇದ್ದ ಬೆಲೆ ಈಗ ಕೇವಲ 500ರಿಂದ 800 ರೂ. ವರೆಗೆ ಖೇಣಿದಾರರು ಕೇಳುತ್ತಿದ್ದಾರೆ. ಹೀಗಾಗಿ, ತಕ್ಷಣ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕಿದೆ.
ಕೋಲ್ಡ್ ಸ್ಟೋರೇಜ್ ಅತ್ಯವಶ್ಯಕವಾಗಿ ಬೇಕು. ಅಡಕೆ, ತೆಂಗು ಸೇರಿದಂತೆ ನೂರಾರು ಬೆಳೆಗಳಿಗೆ ಪರಿಹಾರ ಅನುದಾನ ಸಾಲ-ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ. ಅದರಂತೆ ಹುಣಸೆ ಬೆಳೆಗೂ ಅನುದಾನ ಸಾಲ -ಸೌಲಭ್ಯ ನೀಡುವಂತೆ ರೈತರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಒಬಿಸಿ ಮೀಸಲಾತಿ ಅಂತಿಮಗೊಳಿಸಿಯೇ ಜಿಪಂ, ತಾಪಂ ಚುನಾವಣೆ ನಡೆಸುತ್ತೇವೆ : ಸಚಿವ ಈಶ್ವರಪ್ಪ