ತುಮಕೂರು : ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಸತ್ಯನಾರಾಯಣ ಅವರ ಪತ್ನಿ ಅಮ್ಮಜಮ್ಮ ಅವರನ್ನು ಕಣಕ್ಕಿಳಿಸುವುದಾಗಿ ಘೋಷಿಸುತ್ತಿದ್ದಂತೆ, ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.
ಅಮ್ಮಾಜಮ್ಮ ಅವರ ಹೆಸರು ಘೋಷಣೆಯಾಗುತ್ತಿದ್ದಂತೆ ಜೆಡಿಎಸ್ ಪಕ್ಷದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ಆರಂಭಗೊಂಡಿದೆ. ಅವರ ಮಗ ಸತ್ಯಪ್ರಕಾಶ್ ಚುನಾವಣಾ ಕಾರ್ಯತಂತ್ರದಲ್ಲಿ ತೊಡಗಿದ್ದಾರೆ. ಸತ್ಯನಾರಾಯಣ ಅವರು ಬದುಕಿದ್ದ ಸಂದರ್ಭದಲ್ಲಿ ಹೆಚ್ಚು ಬಹಿರಂಗವಾಗಿ ಕಾಣಿಸಿಕೊಳ್ಳದ ಅಮ್ಮಾಜಮ್ಮ ಅವರನ್ನೇ ಜೆಡಿಎಸ್ ಕಣಕ್ಕಿಳಿಸಿದ್ದು, ಅನುಕಂಪದ ಆಧಾರದ ಮೇಲೆ ಚುನಾವಣೆ ನಡೆಸುವುದು ಸ್ಪಷ್ಟವಾಗುತ್ತಿದೆ.
ಈಗಾಗಲೇ ಕ್ಷೇತ್ರದಲ್ಲಿ ಎರಡು ಬಾರಿ ಪ್ರಚಾರ ನಡೆಸಿದ್ದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಜೆಡಿಎಸ್ ಪಕ್ಷವು ಈ ಹಿಂದಿನ ಅನೇಕ ಉಪ ಚುನಾವಣೆಯ ವೇಳೆ ಪಕ್ಷದ ಶಾಸಕರ ಪತ್ನಿಯರು ಅಥವಾ ಕುಟುಂಬದವರಿಗೆ ಟಿಕೆಟ್ ನೀಡಲಾಗಿತ್ತು. ಕಾರ್ಯಕರ್ತರಲ್ಲಿ ಭಾವನೆಗಳು ಕೂಡ ಇರುತ್ತದೆ, ಅದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು. ಅದೇ ರೀತಿಯ ಪರಿಪಾಠವನ್ನು ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಮುಂದುವರಿಸುವ ಸುಳಿವು ನೀಡಿದ್ದರು.
ಜೆಡಿಎಸ್ಗೆ ಅನುಕಂಪದ ಆಧಾರದ ಮೇಲೆ ಸಾಕಷ್ಟು ಚುನಾವಣೆ ನಡೆಸಿ ಅದರಲ್ಲಿ ಯಶಸ್ಸು ಕೂಡ ಕಂಡಿದೆ. ಹೀಗಾಗಿ, ಶಿರಾ ವಿಧಾನಸಭಾ ಕ್ಷೇತ್ರವನ್ನು ಕೂಡ ವ್ಯವಸ್ಥಿತವಾಗಿ ಉಳಿಸಿಕೊಳ್ಳಲು ಜೆಡಿಎಸ್ ಕಾರ್ಯತಂತ್ರ ರೂಪಿಸುತ್ತಿದೆ.
ಈಗಾಗಲೇ ಒಂದು ಅಂದಾಜಿನ ಪ್ರಕಾರ ಕ್ಷೇತ್ರದಲ್ಲಿ ಜೆಡಿಎಸ್ ಮತ ಬ್ಯಾಂಕ್ ಆಗಿ ಸುಮಾರು 25 ಸಾವಿರ ಮತಗಳಿದ್ದು, ಆದ್ರೂ ಗೆಲುವಿನ ದಡ ಸೇರಲು ಜೆಡಿಎಸ್ ಪಕ್ಷ ಹರಸಾಹಸ ಪಡಬೇಕಾಗಿದೆ. ಆದರೆ, ಜೆಡಿಎಸ್ ಪಕ್ಷಕ್ಕೆ ಗೆಲುವು ಅಷ್ಟು ಸುಲಭ ದಕ್ಕುವುದಿಲ್ಲ. ಯಾಕೆಂದರೆ, ಜೆಡಿಎಸ್ ಮತಬ್ಯಾಂಕಿಗೆ ಕನ್ನ ಹಾಕಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಈಗಾಗಲೇ ಭಾರೀ ಕಾರ್ಯತಂತ್ರ ನಡೆಸುತ್ತಿವೆ.
ಶಿರಾ ವಿಧಾನಸಭಾ ಕ್ಷೇತ್ರದಲ್ಲಿನ ವಕೀಲರ ಸಂಘಟನೆಯಲ್ಲಿರುವ ಜೆಡಿಎಸ್ ಬೆಂಬಲಿತ ವಕೀಲರನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ತಮ್ಮತ್ತ ಸೆಳೆಯಲು ಹಗ್ಗ-ಜಗ್ಗಾಟವನ್ನೇ ಆರಂಭಿಸಿವೆ. ಹೀಗಾಗಿ, ಜೆಡಿಎಸ್ ಮತಬ್ಯಾಂಕಿಗೆ ಕೈಹಾಕಿರುವ ಎರಡು ರಾಷ್ಟ್ರೀಯ ಪಕ್ಷಗಳಿಂದ ಜೆಡಿಎಸ್ ಮೂಲ ಮತದಾರರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಮುಖಂಡರು ಯಾವರೀತಿ ಸಫಲವಾಗ್ತಾರೆ ಎಂಬುದನ್ನು ನಿರೀಕ್ಷಿಸಬೇಕಿದೆ. ಅಲ್ಲದೇ ಈ ಬಾರಿಯ ಶಿರಾ ಕ್ಷೇತ್ರದ ಮತದಾರರು ಅನುಕಂಪದ ಆಧಾರದ ಮೇಲೆ ಅಮ್ಮಾಜಮ್ಮ ಅವರಿಗೆ ಮತ ಹಾಕಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.