ತುಮಕೂರು: ತಾಲೂಕಿನ ಊರ್ಕೆರೆ ಗ್ರಾಮದಲ್ಲಿ ಇಂದು ಬೆಳ್ಳಂಬೆಳಗ್ಗೆ ಗುಂಪೊಂದು ರಾಜಾರೋಷವಾಗಿ ಮಚ್ಚು-ಲಾಂಗು ಹಿಡಿದು ನಾಲ್ವರ ಮೇಲೆ ಹಲ್ಲೆ ನಡೆಸಿರುವ ಘಟನೆ ಜರುಗಿದೆ.
ಜಗದೀಶ್, ಮಂಜುನಾಥ, ಕೃಷ್ಣಪ್ಪ, ಪುರುಷೋತ್ತಮ, ಅಕ್ಷಯ್ ಹಾಗೂ ರಘು ಎಂಬುವರು ಮಾರಕಾಸ್ತ್ರಗಳನ್ನು ಹಿಡಿದು ಗ್ರಾಮದಲ್ಲಿ ಓಡಾಡಿರುವ ದೃಶ್ಯ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಈ ಗುಂಪು ಗ್ರಾಮದ ರಾಜಣ್ಣ, ರಂಗಣ್ಣ, ಪುಟ್ಟನರಸಮ್ಮ, ಸುನಿಲ್ಗೆ ಮಚ್ಚಿನಿಂದ ಎದೆ ಮತ್ತು ಹೊಟ್ಟೆ ಮೇಲೆ ಹಲ್ಲೆ ನಡೆಸಿದೆ. ಗಾಯಗೊಂಡವರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದ ಕೃಷ್ಣಪ್ಪನವರ ಕಾರು ರಸ್ತೆಯಲ್ಲಿ ಹೋಗುತ್ತಿದ್ದಾಗ ರಾಜಣ್ಣನಿಗೆ ತಗುಲಿದೆ. ಇದನ್ನು ರಾಜಣ್ಣ ಪ್ರಶ್ನಿಸಿದ್ದಕ್ಕೆ ಉದ್ರಿಕ್ತಗೊಂಡ ಕೃಷ್ಣಪ್ಪ ಮಚ್ಚು, ಲಾಂಗು ಹಿಡಿದು ಹಲ್ಲೆ ನಡೆಸಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಗಾಯಗೊಂಡವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.