ತುಮಕೂರು: ಸ್ಮಾರ್ಟ್ ಸಿಟಿ ಯೋಜನೆ ಅಡಿ ರಸ್ತೆ ಭಾಗ್ಯ ದೊರೆಯದ ತುಮಕೂರು ಮಹಾನಗರ ಪಾಲಿಕೆಯ 35ನೇ ವಾರ್ಡ್ಗೆ ಮುಖ್ಯಮಂತ್ರಿ ವಿವೇಚನಾ ಕೋಟಾದಡಿ ರಸ್ತೆ ಅಭಿವೃದ್ಧಿಗೆ ನಗರ ಶಾಸಕ ಜ್ಯೋತಿ ಗಣೇಶ್ ಚಾಲನೆ ನೀಡಿದರು.
ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ಬಿಡುಗಡೆಯಾದ 90 ಲಕ್ಷ ರೂ. ಹಣ ವೆಚ್ಚದ ಕಾಮಗಾರಿ ಆರಂಭಿಸಲಾಯಿತು. ತುಮಕೂರು ಮಹಾನಗರ ಪಾಲಿಕೆಯಲ್ಲಿಯೇ ಅತಿದೊಡ್ಡ ವಾರ್ಡ್ ಆಗಿರುವಂತಹ 35ನೇ ವಾರ್ಡ್ ವ್ಯಾಪ್ತಿಗೆ ಬಂಡೆಪಾಳ್ಯ, ದೇವರಾಯಪಟ್ಟಣ, ಸಿದ್ದರಾಮೇಶ್ವರ ಬಡಾವಣೆ, ಮಹಾಲಕ್ಷ್ಮಿ ಬಡಾವಣೆ, ಶ್ರೀನಗರ ಬಡಾವಣೆಗಳು ಸೇರಲಿದ್ದು ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೆ ಟ್ರ್ಯಾಕ್ ಗಳು ವಾರ್ಡ್ ವ್ಯಾಪ್ತಿಯಲ್ಲಿ ಬರುತ್ತವೆ. ಇದು ಒಂದು ರೀತಿ ವಾರ್ಡ್ ವಿಂಗಡನೆ ವೇಳೆ ವಿಚಿತ್ರವಾಗಿ ನಿರ್ಧಾರವನ್ನು ತೆಗೆದುಕೊಂಡಿದ್ದೇ ಇಂತಹ ವಾರ್ಡ್ ಪರಿವರ್ತನೆಯಾಗಲು ಕಾರಣವಾಗಿದೆ.
ಸ್ಮಾರ್ಟ್ ಸಿಟಿ ಕಾಮಗಾರಿ ಎಲ್ಲಾ ಬಡಾವಣೆಗಳಿಗೂ ದೊರೆಯುತ್ತಿಲ್ಲ ಎಂಬ ಕೊರಗು ಬರಬಾರದು ಎಂಬ ಉದ್ದೇಶವನ್ನು ಹೊಂದಲಾಗಿದ್ದು ಮುಖ್ಯಮಂತ್ರಿ ವಿವೇಚನಾ ಕೋಟಾದಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಎಲ್ಲಾ ವಾರ್ಡ್ಗಳ ವರ್ಗದ ಅಭಿವೃದ್ಧಿಗೆ ಮಾತ್ರ ಹಣ ವಿನಿಯೋಗಿಸಲಾಗುತ್ತಿದೆ ಅಲ್ಲದೆ ನಿರ್ದಿಷ್ಟ ಪ್ರದೇಶದ ರಸ್ತೆ ಅಭಿವೃದ್ಧಿಗೆ ಮಾತ್ರ ಸ್ಮಾರ್ಟ್ ಸಿಟಿ ಯೋಜನೆಯಿಂದ ಹಣ ದೊರೆಯುತ್ತಿದೆ ಎಂದು ತಿಳಿಸಿದರು.