ತುಮಕೂರು: ನಮ್ಮ ಹೋರಾಟಕ್ಕೆ ಎಚ್ಚೆತ್ತುಕೊಂಡು ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು. ಇಲ್ಲವಾದರೆ ಜನವರಿ 6ರಂದು ಬೆಂಗಳೂರು ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡು ಬೇಡಿಕೆ ಈಡೇರುವವರೆಗೂ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ರುಪ್ಸದ ಕಾರ್ಯಧ್ಯಕ್ಷ ಡಾ. ಹಾಲನೂರು ಲೇಪಾಕ್ಷ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಖಾಸಗಿ ಅನುದಾನರಹಿತ ಶಾಲೆಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ತುಮಕೂರು ಜಿಲ್ಲಾ ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕೋವಿಡ್-19 ನಿಂದಾಗಿ ಹಲವಾರು ಸಮಸ್ಯೆಗಳು ತಲೆದೋರಿದ್ದು, ಶಿಕ್ಷಣ ವ್ಯವಸ್ಥೆಯಲ್ಲಿಯೂ ಸಮಸ್ಯೆಗಳು ಉಲ್ಬಣವಾಗಿವೆ. ಲಕ್ಷಾಂತರ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿರುವ ನಮ್ಮ ಸಂಸ್ಥೆಗಳು ಕೂಡ ತೊಂದರೆಗೆ ಒಳಗಾಗಿದ್ದು, ಮಕ್ಕಳ ಹಿತದೃಷ್ಟಿಯಿಂದ ಉತ್ತಮವಾದ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಸಂಸ್ಥೆಗಳು ಹಾಗೂ ಶಿಕ್ಷಕರಿಗೆ ಸಹಾಯವಾಗುವಂತೆ ಸರ್ಕಾರದಿಂದ 1,000 ಕೋಟಿ ಆರ್ಥಿಕ ಸಹಾಯಧನವನ್ನು ಬಿಡುಗಡೆಗೊಳಿಸಬೇಕು. ಖಾಸಗಿ ಶಾಲೆಗಳಿಗೆ ನೀಡಿರುವ ಆರ್ಟಿಇ ಹಣವನ್ನು ಶಾಲೆಯ ಪ್ರಾರಂಭಿಕ ಹಂತದಲ್ಲಿ ಅಂದರೆ ಜೂನ್ ತಿಂಗಳಿನಲ್ಲಿ ಒಂದೇ ಕಂತಿನಲ್ಲಿ ಹಣ ಬಿಡುಗಡೆಗೊಳಿಸಬೇಕು. ರಾಜ್ಯ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯಗಳು ಖಾಸಗಿ ಶಾಲಾ ನೌಕರರಿಗೂ ಸಿಗುವಂತೆ ಆದೇಶ ಹೊರಡಿಸಬೇಕು ಎಂಬ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟಿಸಲಾಯಿತು.
ಈ ವೇಳೆ ಮಾತನಾಡಿದ ಡಾ. ಹಾಲನೂರು ಲೇಪಾಕ್ಷ್, ಸುಮಾರು 9 ತಿಂಗಳುಗಳಿಂದ ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರು ಜೀವನ ನಡೆಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬಕ್ಕೆ ಸರ್ಕಾರ ಆರ್ಥಿಕ ರೀತಿಯಲ್ಲಿ ಪ್ಯಾಕೇಜ್ ಘೋಷಣೆ ಮಾಡಬೇಕು. ನವಂಬರ್ 10ರಂದು ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ವಾಪಸ್ ಪಡೆಯಬೇಕು. ಶಿಕ್ಷಣ ಸಚಿವರಿಗೆ ನಮ್ಮ ಸಮಸ್ಯೆಗಳು ಕಾಣುತ್ತಿಲ್ಲವೇ? ಅವರು ಏಕೆ ಬೇಜವಾಬ್ದಾರಿ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.