ತುಮಕೂರು: ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ತುಂಬಿ ಹರಿಯುತ್ತಿರುವ ಜಯಮಂಗಲಿ ನದಿಯ ಪ್ರವಾಹದಿಂದ ಸ್ಥಳೀಯರು ಮೃತ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡುವುದಕ್ಕೂ ಪರದಾಡುವಂತಾಗಿದೆ. ಮಧುಗಿರಿ ತಾಲೂಕಿನ ಗೌರೆಡ್ಡಿಪಾಳ್ಯದ ಗ್ರಾಮಸ್ಥರು ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರಕ್ಕೆ ಪರದಾದುತ್ತಿದ್ದು, ಇವರ ಪಾಡು ಹೇಳ ತೀರದಾಗಿದೆ.
ಮಧುಗಿರಿ ತಾಲೂಕಿನ ಗೌರೆಡ್ಡಿ ಪಾಳ್ಯದಲ್ಲಿ ನಿವೃತ್ತ ಶಿಕ್ಷಕ ಸದಾಶಿವರೆಡ್ಡಿ ಎಂಬುವರು ಭಾನುವಾರ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ನಿರಂತರ ಮಳೆಯಿಂದ ಹಾಗೂ ತುಂಬಿ ಹರಿಯುತ್ತಿರುವ ನದಿಯಿಂದ ಅವರ ಅಂತ್ಯಸಂಸ್ಕಾರ ಮಾಡುವುದಕ್ಕೆ ಇನ್ನಿಲ್ಲದ ಹರಸಾಹಸ ಪಡಬೇಕಾಯಿತು.
ಮೃತ ತಾತನ ಅಂತ್ಯ ಸಂಸ್ಕಾರ ನೆರವೇರಿಸಲು 12 ದಿನದ ಬಾಣಂತಿಯಾಗಿರುವ ಮೊಮ್ಮಗಳು ತಮ್ಮ ಮಗುವಿನೊಂದಿಗೆ 1 ಕಿಲೋ ಮೀಟರ್ ದೂರವನ್ನು ಜಮೀನಿನ ಬದುಗಳಲ್ಲಿ ನಡೆದು ಬರಬೇಕಾಯಿತು. ಕೊಡಿಗೇನಹಳ್ಳಿಯ ಜಯಮಂಗಲಿ ನದಿ ಅಂಚಿನಲ್ಲಿರುವ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು, ಸೂಕ್ತ ರಸ್ತೆ ಇಲ್ಲದೆ ಅಂತ್ಯಸಂಸ್ಕಾರ ನಡೆಸಲು ಇಂದಿಗೂ ಪರದಾಡುವಂತಹ ಪರಿಸ್ಥಿತಿ ಇದೆ.
ಸಂಬಂಧಿಕರು ಬಾಣಂತಿಯ ಕೈ ಹಿಡಿದುಕೊಂಡು ನದಿ ದಾಟಿದ್ದಾರೆ. ಇನ್ನು, ಬೆಳಗಾದರೆ ನಿತ್ಯ ಶಾಲಾ-ಕಾಲೇಜು ಹಾಗೂ ಡೈರಿಗೆ ಹಾಲು ಹಾಕಲು ದಿನಸಿ ತರಲು ಜಯಮಂಗಲಿ ನದಿ ದಡ ಅಥವಾ ನದಿ ಪಕ್ಕದ ಜಮೀನು ಆಶ್ರಯಿಸಬೇಕು. ಈ ರೀತಿ ನದಿ ಉಕ್ಕಿ ಬಂದಾಗ ವೃದ್ಧರು, ವಿದ್ಯಾರ್ಥಿಗಳು, ಮಹಿಳೆಯರು, ಗರ್ಭಿಣಿಯರು ಹಾಗೂ ರೋಗಿಗಳ ಯಾತನೆ ಕರಳು ಹಿಂಡಿಯುವಂತಿದೆ.
ಇದನ್ನೂ ಓದಿ: ಮೋದಿ ಒರಟು ವ್ಯಕ್ತಿ ಅಂದ್ಕೊಂಡಿದ್ದೆ, ಆದ್ರೆ ಅವ್ರಿಗೆ ಮಾನವೀಯತೆ ಇದೆ: ಗುಲಾಂ ನಬಿ ಆಜಾದ್