ತುಮಕೂರು: ಜಿಲ್ಲೆಯಲ್ಲಿ ಚಿರತೆ ಹಾವಳಿ ಜನರನ್ನು ಪ್ರಾಣಭೀತಿಗೆ ದೂಡಿದೆ. ಚಿರತೆ ಸೆರೆ ಹಿಡಿಯಲು ಗುಬ್ಬಿ ತಾಲೂಕಿನ ಮಣ್ಣಿಕುಪ್ಪೆ ಗ್ರಾಮದಲ್ಲಿ ಕೂಂಬಿಂಗ್ ನಡೆದಿದೆ. ಬನ್ನೇರುಘಟ್ಟ, ಬಂಡಿಪುರ, ನಾಗರಹೊಳೆಯ ವಿಶೇಷ ಅರಣ್ಯ ಪಡೆಯಿಂದ ಕೂಂಬಿಂಗ್ ಆರಂಭವಾಗಿದೆ. ಸ್ಪೆಷಲ್ ಟೈಗರ್ ಫೋರ್ಸ್ (ಎಸ್ಟಿಎಫ್)ನಿಂದ ಕಾರ್ಯಾಚರಣೆ ನಡೆದಿದ್ದು, ಹಗಲಿರುಳು ನರಭಕ್ಷಕ ಚಿರತೆ ಸೆರೆ ಹಿಡಿಯಲು ಪಣ ತೊಟ್ಟಿದ್ದಾರೆ.
ಕಳೆದ ಗುರುವಾರ ಬಾಲಕನನ್ನು ಬಲಿ ತೆಗೆದುಕೊಂಡಿದ್ದ ನರಭಕ್ಷಕ ಚಿರತೆ ಗುಬ್ಬಿ ತಾಲೂಕಿನಲ್ಲಿ ಓಡಾಡುತ್ತಿದೆ ಎಂಬ ಮಾಹಿತಿ ಅರಣ್ಯ ಇಲಾಖೆಗೆ ಲಭ್ಯವಾಗಿದೆ. ಹೀಗಾಗಿ ಗುಬ್ಬಿ ತಾಲೂಕಿನ ಮಣಿಕುಪ್ಪೆ, ದೊಡ್ಡಮಳವಾಡಿ, ಚಿಕ್ಕಮಳವಾಡಿ, ಸಿ.ಎಸ್ ಪುರ, ಹೆಬ್ಬೂರು ಸುತ್ತಮುತ್ತಲ ಪೊದೆಗಳು ಮತ್ತು ಮೀಸಲು ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ನಡೆದಿದೆ.
ಈಗಾಗಲೇ ಸಿ.ಎಸ್ ಪುರ ಹೋಬಳಿಯ ಸುತ್ತಮುತ್ತ 20 ಬೋನುಗಳನ್ನ ಇರಿಸಲಾಗಿದೆ. ಮಣ್ಣಿಕುಪ್ಪೆ ಗ್ರಾಮದಲ್ಲಿ ಬೀಡು ಬಿಟ್ಟಿರುವ ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣಿಗೆ ಚಾಲಾಕಿ ಚೀತಾ ಪತ್ತೆಯಾಗುತ್ತಿಲ್ಲ. ಇದುವರೆಗೆ ನರಭಕ್ಷಕ ಚೀತಾಗೆ ಮೂವರು ಬಲಿಯಾಗಿದ್ದಾರೆ. ಸಿಸಿಎಫ್ ಶಂಕರ್, ಡಿಎಫ್ಒ ಗಿರೀಶ್ ಸೇರಿದಂತೆ ಉನ್ನತಮಟ್ಟದ ಅಧಿಕಾರಿಗಳ ತಂಡ ಸ್ಥಳಕ್ಕೆ ದೌಡಾಯಿಸಿದೆ.
60ಕ್ಕೂ ಹೆಚ್ಚು ಸಿಬ್ಬಂದಿ ಕೂಂಬಿಂಗ್ನಲ್ಲಿ ಭಾಗಿಯಾಗಿದ್ದಾರೆ. ಸುಮಾರು ನಾಲ್ಕು ಚಿರತೆಗಳು ಸಿ.ಎಸ್ ಪುರ ಸುತ್ತಮುತ್ತ ಇವೆ ಎಂದು ಅಂದಾಜು ಮಾಡಲಾಗಿದೆ. ಕೆಲ ತೋಟಗಳಿಂದ ಚಿರತೆ ಓಡಿ ಹೋಗಿರುವ ಹೆಜ್ಜೆ ಗುರುತು ಪತ್ತೆಯಾಗಿದ್ದು, ಇದರ ಜಾಡು ಹಿಡಿದು ಕಾರ್ಯಾಚರಣೆ ನಡೆದಿದೆ.