ಪಾವಗಡ(ತುಮಕೂರು): ಆಂಧ್ರಪ್ರದೇಶ ಸರ್ಕಾರ ಕೈಗೊಂಡಿದ್ದ ಪೆರೂರು ಡ್ಯಾಂಗೆ ನೀರು ತುಂಬಿಸುವ ಯೋಜನೆ ಪೂರ್ಣಗೊಂಡಿದ್ದು, ತಾಲೂಕಿನ ಉತ್ತರ ಪಿನಾಕಿನಿ ನದಿ ಮೂಲಕ ನೀರು ತುಂಬಿ ಹರಿಯಲಿದೆ.
ಆಂಧ್ರ ಸರ್ಕಾರ ಸುಮಾರು 13 ಕೋಟಿ ರೂ. ವ್ಯೆಚ್ಚದಲ್ಲಿ ಕೃಷ್ಣ ನದಿಯ ನೀರನ್ನು ಪೆರೂರು ಡ್ಯಾಂಗೆ ತುಂಬಿಸುವ ಯೋಜನೆ ಕೈಗೊಂಡಿತ್ತು. ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಗೋಲ್ಲಪಲ್ಲಿ ಡ್ಯಾಂನಲ್ಲಿ ಸಂಗ್ರಹವಾಗಿದ್ದ ಶ್ರೀಶೈಲಂನ ಕೃಷ್ಣ ನದಿ ನೀರನ್ನು ನಾಗಲಮಡಿಕೆಯ ಉತ್ತರ ಪಿನಾಕಿನಿ ನದಿಯ ಮೂಲಕ ಪೆರೂರು ಡ್ಯಾಂಗೆ ನೀರು ಸರಬರಾಜು ಮಾಡಲಾಗುತ್ತಿದೆ.
ಸುಮಾರು ಮೂರು ದಿನಗಳಿಂದ ಹರಿದ ನೀರಿನಿಂದ ಇಂದು ನಾಗಲಮಡಿಕೆ ಡ್ಯಾಂ ತುಂಬಿ ಆಂಧ್ರದ ಪೆರೂರು ಕಡೆ ಸಾಗಲಿದ್ದು, ನಾಗಲಮಡಿಕೆ ಡ್ಯಾಂ ತುಂಬಿರುವುದನ್ನು ನೂರಾರು ಜನ ನೋಡಿ ಕಣ್ತುಂಬಿಕೊಂಡರು.