ತುಮಕೂರು: ಮೂಢನಂಬಿಕೆ ಪಾಲಿಸಲು ಬಾಣಂತಿ ಹಾಗೂ ಶಿಶುವನ್ನು ಊರಿನಿಂದ ಹೊರಗಿಟ್ಟಾಗ ಜಿಲ್ಲೆಯ ಗೊಲ್ಲರಹಟ್ಟಿ ಸಮೀಪ ಮಗು ಮೃತಪಟ್ಟು ಬಾಣಂತಿ ನರಳಾಡಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿದೆ. ಮತ್ತೊಬ್ಬ ಬಾಣಂತಿಯನ್ನು ಗ್ರಾಮದಿಂದ ಹೊರಗಿಡಲಾಗಿದ್ದು, ನ್ಯಾಯಾಧೀಶರು ಮಧ್ಯಪ್ರವೇಶಿಸಿ ಮೌಢ್ಯಾಚರಣೆಗೆ ತಡೆಯೊಡ್ಡಿದ ಘಟನೆ ಗುಬ್ಬಿ ತಾಲೂಕಿನ ವರದೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಬಾಣಂತಿಯನ್ನು ಹೊರಗಿಟ್ಟಿರುವ ಬಗ್ಗೆ ಬುಧವಾರ ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಗುಬ್ಬಿ ನ್ಯಾಯಾಲಯದ ನ್ಯಾಯಾಧೀಶರಾದ ಉಂಡಿ ಮಂಜುಳ ಶಿವಪ್ಪ ಅವರು ಗ್ರಾಮದಿಂದ ಹೊರಗಡೆ ಇರಿಸಲಾಗಿದ್ದ ಶಿಶು ಮತ್ತು ಬಾಣಂತಿಯನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೇ, ಕುಟುಂಬದವರಿಗೆ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟು, ಮಗು ಹಾಗೂ ಬಾಣಂತಿಯನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಮಗು ಬಾಣಂತಿ ಊರಿಂದಾಚೆಗೆ ಇಡಲಾಗಿತ್ತು. ಯಾವುದೇ ಸ್ವಚ್ಛತೆ ಇಲ್ಲದೇ ಅನಾರೋಗ್ಯಕರ ವಾತಾವರಣದಲ್ಲಿ ಚಿಕ್ಕ ಗುಡಿಸಲಿನಲ್ಲಿ ಮಗು ಬಾಣಂತಿಯನ್ನು ಇರಿಸಲಾಗಿತ್ತು. ಗ್ರಾಮಕ್ಕೆ ಭೇಟಿ ನೀಡಿದ ನ್ಯಾಯಾಧೀಶರು ಮಗುವನ್ನು ತಾವೇ ಕೈಗೆತ್ತಿಕೊಂಡು ಮನೆಗೆ ಕರೆತಂದು ಬಿಟ್ಟಿದ್ದಾರೆ. ಇಂತಹ ಘಟನೆ ಮತ್ತೆ ಮರುಕಳಿಸಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜನರಿಗೆ ನ್ಯಾಯಾಧೀಶರು ಎಚ್ಚರಿಕೆ ಕೂಡಾ ನೀಡಿದ್ದಾರೆ.
ಇದನ್ನೂ ಓದಿ: ಸೂತಕದ ಸಂಪ್ರದಾಯ ಆಚರಣೆ: ಊರ ಹೊರಗಿನ ಗುಡಿಸಲೊಳಗಿಂದ ಯಾರಿಗೂ ಕೇಳಿಸದ ಬಾಣಂತಿ, ಕಂದಮ್ಮನ ಪಾಡು!
ಮೂಢನಂಬಿಕೆಗೆ ಬಲಿಯಾಗಿತ್ತು ಶಿಶು: ತಿಂಗಳ ಹಿಂದಷ್ಟೇ ಮೂಢನಂಬಿಕೆಯಂತೆ ಗೊಲ್ಲರಹಟ್ಟಿ ಗ್ರಾಮದಲ್ಲಿ ಬಾಣಂತಿ ಹಾಗೂ ಶಿಶುವನ್ನು ಉರಿನ ಹೊರಗಡೆ ಗುಡಿಸಲಿನಲ್ಲಿ ಇರಿಸಲಾಗಿತ್ತು. ಕಾಡುಗೊಲ್ಲ ಸಮುದಾಯವು ತಮ್ಮ ಕಟ್ಟುಪಾಡಿನಂತೆ ಸೂತಕ ಎಂದು ಬಾಣಂತಿ ಮತ್ತು ಮಗುವನ್ನು ಗುಡಿಸಲಿನಲ್ಲಿ ಇರಿಸಿತ್ತು. ಗುಡಿಸಿಲಿನಲ್ಲಿದ್ದಾಗ ಅನಾರೋಗ್ಯಕ್ಕೀಡಾದ ಹೆಣ್ಣು ಮಗು ಮೃತಪಟ್ಟಿತ್ತು. ಹೆರಿಗೆ ಬಳಿಕ ನವಜಾತ ಹೆಣ್ಣು ಮಗುವಿನೊಂದಿಗೆ ಬಾಣಂತಿ ಗ್ರಾಮಕ್ಕೆ ಮರಳಿದರೆ ದೇವರಿಗೆ ಸೂತಕ ಆಗಿಬರುವುದಿಲ್ಲ ಎಂದು ಊರ ಹೊರಗಿನ ಗುಡಿಸಿಲಿನಲ್ಲಿ ಇರಿಸಲಾಗುತ್ತಿದೆ. ಮಳೆ ಹಿನ್ನೆಲೆಯಲ್ಲಿ ಶೀತ ವಾತಾವರಣದಿಂದ ಶಿಶುವಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಬಳಿಕ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಸಹ ಚಿಕಿತ್ಸೆ ಫಲಿಸದೇ ಐಸಿಯುನಲ್ಲಿಯೇ ಶಿಶು ಮೃತಪಟ್ಟಿತ್ತು.
ತಹಶೀಲ್ದಾರ್, ಅಧಿಕಾರಿಗಳ ಭೇಟಿ: ಘಟನೆ ಬೆಳಕಿಗೆ ಬರುತ್ತಿದ್ದಂತೆ ಮಲ್ಲೇನಹಳ್ಳಿ ಗೊಲ್ಲರಹಟ್ಟಿಗೆ ತುಮಕೂರು ತಹಶೀಲ್ದಾರ್ ಮತ್ತು ಆರೋಗ್ಯ ಅಧಿಕಾರಿಗಳು ಭೇಟಿ ನೀಡಿದ್ದರು. ತಹಶೀಲ್ದಾರ್ ಸಿದ್ದೇಶ್, ಆರ್ಸಿಎಚ್ ಮೋಹನ್, ಟಿಎಚ್ಓ ಲಕ್ಷ್ಮೀಕಾಂತ್ ಸೇರಿದಂತೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಬುದ್ದಿಮಾತು ಹೇಳಿದ್ದರು. ಬಾಣಂತಿಗೆ ಮನೆಯಲ್ಲಿ ಬಿಟ್ಟುಕೊಳ್ಳಬೇಕು ಹಾಗೂ ಇಂತಹ ಮೂಢನಂಬಿಕೆ ಆಚರಣೆ ಕೈಬಿಡುವಂತೆ ಗ್ರಾಮದ ಜನರಿಗೆ ತಿಳಿಸಿದ್ದರು.
ನ್ಯಾಯಾಧೀಶರ ಭೇಟಿ: ಶಿಶು ಮೃತಪಟ್ಟ ಹಿನ್ನೆಲೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾ. ನೂರುನ್ನೀಸಾ ಅವರು ಕೂಡ ಮಲ್ಲೇನಹಳ್ಳಿಗೆ ದಿಢೀರ್ ಭೇಟಿ ನೀಡಿ, ಪರಿಸ್ಥಿತಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಗ್ರಾಮಸ್ಥರು ಹಾಗೂ ಸ್ಥಳೀಯ ಸರ್ಕಾರಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದರು. ಆದರೂ ಸಹ ಮೂಢನಂಬಿಕೆ ಮತ್ತೆ ಮುಂದುವರೆದಿದೆ. ಸದ್ಯ ನ್ಯಾಯಾಧೀಶರು ಮತ್ತೊಮ್ಮೆ ಸ್ಥಳಕ್ಕೆ ಭೇಟಿ ನೀಡಿ ಆಚರಣೆಗೆ ಬ್ರೇಕ್ ಹಾಕಿದ್ದಾರೆ.
ಇದನ್ನೂ ಓದಿ: ತುಮಕೂರು: ಊರ ಹೊರಗಿನ ಗುಡಿಸಲಿನಲ್ಲಿ ಇರಿಸಲಾಗಿದ್ದ ಮಗು ಸಾವು; ಮೂಢನಂಬಿಕೆಗೆ ಕಂದಮ್ಮ ಬಲಿ!