ತುಮಕೂರು: ಹಿಜಾಬ್, ಜಟ್ಕಾ ಕಟ್ ಬೇಕಿಲ್ಲದ ವಿಚಾರಗಳು. ರಾಜ್ಯದಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸಾರ್ವಜನಿಕರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೆಟ್ರೋಲ್- ಡೀಸೆಲ್ ದರ ಏರಿಕೆಯಾಗಿದೆ, ಅಭಿವೃದ್ಧಿ ಕುಠಿಂತಗೊಂಡಿದೆ. ಈ ಬೆನ್ನಲ್ಲೇ ಕೆಲ ಸ್ವಾಮೀಜಿಗಳನ್ನು ಕರೆದುಕೊಂಡು ಬಂದು ಬಿಜೆಪಿಯವರು ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ ಅಂತಾ ಶಾಸಕ ಎಸ್ ಆರ್ ಶ್ರೀನಿವಾಸ್ ಆರೋಪಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವ ವಿಚಾರಗಳ ಮೇಲೆ ಚರ್ಚೆ ಆಗಬೇಕೋ ಅದು ಆಗುತ್ತಿಲ್ಲ. ಬೆಲೆ ಏರಿಕೆ ವಿಚಾರ ಮರೆಮಾಚಲು ಯಾವುದೋ ಸ್ವಾಮೀಜಿಗಳನ್ನು ಕರೆದುಕೊಂಡು ಬಂದು ಹೇಳಿಕೆ ಕೊಡಿಸುತ್ತಿದ್ದಾರೆ. ನಿನ್ನೆ ಒಬ್ಬ ಸ್ವಾಮೀಜಿ ಧಾರ್ಮಿಕ ಕೇಂದ್ರಗಳಿಗೆ ಮುಸ್ಲಿಂ ಡ್ರೈವರ್ ಕರೆದುಕೊಂಡು ಹೋಗ್ಬೇಡಿ ಎಂದಿದ್ದಾರೆ. ಹೀಗೆಲ್ಲಾ ಅನಾವಶ್ಯಕ ಹೇಳಿಕೆ ನೀಡಬಾರದು. ಕಾವಿಬಟ್ಟೆ ತೊಟ್ಟವರು ಅವರವರ ಕೆಲಸ ಮಾಡ್ಕೊಂಡು ಇದ್ರೆ ದೇಶ ಶಾಂತವಾಗಿರುತ್ತದೆ ಎಂದರು.
ಆರಗ ಜ್ಞಾನೇಂದ್ರ ಗೃಹ ಸಚಿವರಾಗಿ ಬೇಜವಾಬ್ದಾರಿ ಹೇಳಿಕೆ ಕೊಟ್ಟಿರುವುದು ತಪ್ಪು. ರಾಜ್ಯದ ಶಾಂತಿ ಕದಡುವ ಕೆಲಸ ಮಾಡಬಾರದು. ಶಾಂತಿ ಕದಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಗಲಭೆಗಳನ್ನು ನಿಯಂತ್ರಣ ಮಾಡುವುದು ಗೃಹ ಸಚಿವರ ಕರ್ತವ್ಯ. ಆದ್ರೆ ಇವರೇ ಪ್ರಚೋದನಾಕಾರಿ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ರಾಜೀನಾಮೆ ಕೊಡುವುದು ಸೂಕ್ತ ಎಂದು ಶಾಸಕ ಶ್ರೀನಿವಾಸ್ ಒತ್ತಾಯಿಸಿದರು.
ಇದನ್ನೂ ಓದಿ: ನಾಳೆಯಿಂದ 18+ ವಯಸ್ಸಿನವರಿಗೆ ಮುನ್ನೆಚ್ಚರಿಕಾ ಡೋಸ್: ಸಚಿವ ಸುಧಾಕರ್