ತುಮಕೂರು : ನಾಳೆ ಶಾಲೆ ಪುನಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕರು ಕಡ್ಡಾಯವಾಗಿ ವ್ಯಾಕ್ಸಿನ್ ಪಡೆಯಬೇಕೆಂದು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದರು.
ತುಮಕೂರು ತಾಲೂಕಿನ ಸಿದ್ಧಾರ್ಥ ಶಾಲೆ, ವಿದ್ಯಾನಿಕೇತನ ಶಾಲೆ ಹಾಗೂ ತುಮಕೂರು ನಗರದ ಎಂಪ್ರೆಸ್ ಶಾಲೆಗೆ ಭೇಟಿ ನೀಡಿ, ನಾಳೆ ಶಾಲೆಯ ಪುನಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತಂತೆ ಸಚಿವ ಬಿ ಸಿ ನಾಗೇಶ್ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು, ಇದುವರೆಗೂ ಶಿಕ್ಷಕರಿಗೆ ಶಾಲೆಗಳಿಗೆ ಹಾಜರಾಗಲು ಅನುಮತಿ ನೀಡುವುದಿಲ್ಲ. ಶಿಕ್ಷಕರಿಗೆ ವ್ಯಾಕ್ಸಿನ್ ಪಡೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಕಳೆದ ಒಂದೂವರೆ ವರ್ಷದಿಂದ ಮಕ್ಕಳಿಗೆ ಆನ್ಲೈನ್ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಿಲ್ಲ. ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಸೇರಿಸಿರುವುದರಿಂದ ತರಗತಿಗಳಲ್ಲಿ ಪಠ್ಯಕ್ರಮಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಅದರಂತೆ 9, 10, 11ನೇ ತರಗತಿಗೆ ಶಾಲೆಯನ್ನ ಆರಂಭಿಸಲಾಗುತ್ತಿದೆ. ಆದರೆ, ಯಾವುದೇ ರೀತಿಯ ಕಡ್ಡಾಯ ಹಾಜರಾತಿ ಇರುವುದಿಲ್ಲ ಎಂದರು.
ಟಾಸ್ಕ್ಫೋರ್ಸ್ ಸಮಿತಿ ಮತ್ತು ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ಮೇರೆಗೆ ಶಾಲೆಗಳನ್ನು ಆರಂಭಿಸಲಾಗುತ್ತದೆ. ಸರಿಯಾಗಿ ನಿಯಮಾವಳಿಗಳನ್ನು ಪಾಲನೆ ಮಾಡಲಾಗುತ್ತಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು, ಈಗಾಗಲೇ ಅನೇಕ ಶಾಲೆಗಳಿಗೆ ಭೇಟಿ ಮಾಡಿ ಪರಿಶೀಲಿಸಿದ್ದೇನೆ ಎಂದು ತಿಳಿಸಿದರು.
ಓದಿ: ಪಾಲಿಕೆ ಉಪಚುನಾವಣೆ : ಕಾಂಗ್ರೆಸ್ ಪ್ರಚಾರ ಪತ್ರದಲ್ಲಿ ಜಿ ಟಿ ದೇವೇಗೌಡರ ಪುತ್ರನ ಫೋಟೋ