ತುಮಕೂರು: ಜಿಲ್ಲೆಯ ಗಡಿ ಭಾಗದ ಪ್ರದೇಶಗಳು ಮಟ್ಕಾ ದಂಧೆಕೋರರ ತಾಣವಾಗುತ್ತಿವೆ ಎಂದು ಸ್ಥಳೀಯರ ಆರೋಪಿಸಿದ್ದಾರೆ.
ನೆರೆಯ ಆಂಧ್ರಪ್ರದೇಶದಿಂದ ಆರಂಭಗೊಂಡು ಬೆಂಗಳೂರುವರೆಗೂ ವ್ಯಾಪಿಸಿರುವ ಮಟ್ಕಾ ದಂಧೆ ನಿಯಂತ್ರಿಸುವುದು ಜಿಲ್ಲಾ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಇದರಲ್ಲಿ ಮುಖ್ಯವಾಗಿ ಪಾವಗಡ ತಾಲೂಕು ಮಟ್ಕಾ ಹಾಗೂ ಇಸ್ಪೀಟ್ ದಂಧೆ ಹೇರಳವಾಗಿ ನಡೆಯುತ್ತಿದೆ.
ಸ್ಥಳೀಯವಾಗಿ ಮೂರು ಮಟ್ಕಾ ಕಂಪನಿಗಳು ಮುಂಬೈ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಜಾಲ ಬೆಂಗಳೂರಿಗೂ ಸಂಪರ್ಕ ಹೊಂದಿದೆ. ದಂಧೆಕೋರರು ಪೊಲೀಸರ ಕೈಗೆ ಸಿಕ್ಕಿ ಬೀಳದಂತೆ ವಾಟ್ಸ್ಆ್ಯಪ್ ಮುಖಾಂತರ ಮಟ್ಕಾ ನಂಬರ್ಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆಂಬ ಆಪಾದನೆ ಕೇಳಿ ಬಂದಿದೆ.
ಪಾವಗಡದಲ್ಲಿ ಕಳೆದ ನಾಲ್ಕು ತಿಂಗಳಿಂದ ನಿರಂತರವಾಗಿ ಮಟ್ಕಾ ಕೇಂದ್ರಗಳ ಮೇಲೆ ದಾಳಿ ಮಾಡುತ್ತಲೇ ಇದ್ದೇವೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ಸಾಕಷ್ಟು ಇಸ್ಪೀಟ್ ದಂಧೆ ಕೇಂದ್ರಗಳನ್ನು ಮಟ್ಟ ಹಾಕಿದ್ದೇವೆ. ಮಟ್ಕಾ ದಂಧೆ ಕಡಿವಾಣ ಹಾಕಲು ಅನಂತಪುರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಿರಂತರವಾಗಿ ಮಾತುಕತೆ ನಡೆಸಲಾಗಿದೆ. ಮಟ್ಕಾ ದಂಧೆ ಕೋರರು ವಾಟ್ಸ್ಆ್ಯಪ್ ಮತ್ತು ಆನ್ಲೈನ್ ಮೊರೆ ಹೋಗಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ಹೇಳಿದರು.