ತುಮಕೂರು: ಮದುವೆಯಾದ ಒಂದೇ ವಾರದಲ್ಲಿ ಯುವಕ ನಾಪತ್ತೆಯಾಗಿದ್ದು, ಪ್ರೀತಿಸಿ ಅಂತರ್ಜಾತಿ ವಿವಾಹ ಆಗಿದ್ದ ಯುವತಿ ಈಗ ಬೀದಿಪಾಲಾಗಿದ್ದಾಳೆ. ಈ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ಹಿಂಡಿಸ್ಕೆರೆ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಿಖಿಲ್ ಮತ್ತು ಚೈತ್ರಾ ಪ್ರೀತಿಸಿ ಮದುವೆಯಾಗಿದ್ದರು. ಮನೆಯವರ ವಿರೋಧದ ನಡುವೆಯೂ ಇಬ್ಬರೂ ಒಂದಾಗಿದ್ದರು. ಆದರೆ, ನಿಖಿಲ್ ಹೆಂಡತಿಯನ್ನು ಬಿಟ್ಟು ಪರಾರಿಯಾಗಿದ್ದು, ಗಂಡನನ್ನು ಹುಡುಕಿಕೊಡುವಂತೆ ಚೈತ್ರಾ ಕಣ್ಣೀರು ಹಾಕಿದ್ದಾಳೆ.
ನಿಖಿಲ್-ಚೈತ್ರಾ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಆದ್ರೆ ಇಬ್ಬರದ್ದೂ ಜಾತಿ ಬೇರೆ ಬೇರೆಯಂತೆ. ಚೈತ್ರಾ ಮೂಲತಃ ತಿಪಟೂರು ತಾಲೂಕಿನ ಅಟ್ನ ಗ್ರಾಮದವಳು. ತುರುವೇಕೆರೆಯ ಮೊಬೈಲ್ ಶಾಪ್ ಒಂದರಲ್ಲಿ ಈಕೆ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದಳು. ಅದೇ ಮೊಬೈಲ್ ಶಾಪ್ ಫೈನಾನ್ಸ್ ವಿಭಾಗದಲ್ಲಿ ನಿಖಿಲ್ ಕೆಲಸ ಮಾಡುತ್ತಿದ್ದ. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆದ್ರೆ ಮದುವೆಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ವಿರೋಧದ ನಡುವೆಯೂ ದೇವಸ್ಥಾನದಲ್ಲಿ ತಾಳಿ ಕಟ್ಟಿದ್ದ ನಿಖಿಲ್ ಇದೀಗ ನಾಪತ್ತೆ ಆಗಿದ್ದಾನೆ.
ಕಳೆದ ಫೆಬ್ರವರಿ 4ರಂದು ನಿಖಿಲ್ ಮತ್ತು ಚೈತ್ರಾ ಮದುವೆಯಾಗಿತ್ತು. ಫೆಬ್ರವರಿ 7ರಂದು ಸಬ್ ರಿಜಿಸ್ಟರ್ ಕಚೇರಿಯಲ್ಲಿ ವಿವಾಹ ನೋಂದಣಿಯನ್ನು ಸಹ ಮಾಡಿಸಿದ್ದರು. ಬಳಿಕ ತಿಪಟೂರು ತಾಲೂಕು ಕಿಬ್ಬನಳ್ಳಿ ಬಳಿಯ ಇಂಡಿಸ್ಕೆರೆ ಗ್ರಾಮದಲ್ಲಿ ಮನೆ ಮಾಡಿದ್ದರು. ಆದರೆ, ಇದ್ದಕ್ಕಿದ್ದಂತೆ ತಾಯಿಗೆ ಹುಷಾರಿಲ್ಲ ಎಂದು ತಿಪಟೂರಿಗೆ ಹೋದ ನಿಖಿಲ್ ವಾಪಸ್ ಬಂದಿಲ್ಲ. ಫೆಬ್ರವರಿ 10ರಂದು ತಾಯಿ ನೋಡಬೇಕೆಂದು ತೆರಳಿರುವ ನಿಖಿಲ್, ಮನೆಗೆ ಹೋದ ಕೆಲವೇ ಗಂಟೆಗಳಲ್ಲಿ ಎರಡೂ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನಂತೆ.
ಚೈತ್ರಾ ಎಷ್ಟೇ ಪ್ರಯತ್ನ ಪಟ್ಟರು ನಿಖಿಲ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಗಂಡನನ್ನ ಹುಡುಕಲು ಹೋದ ಚೈತ್ರಾಗೆ ನಿಖಿಲ್ ತಂದೆ ಬಸವರಾಜು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪ ಕೇಳಿಬಂದಿದೆ. ನಿನ್ನ ಮೇಲೆಯೇ ದೂರು ಕೊಡುತ್ತೇನೆ ಅಂತ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ಚೈತ್ರಾ, ಗಂಡನನ್ನ ಹುಡುಕಿಕೊಡಿ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಸದ್ಯ ಈ ಪ್ರಕರಣ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಓದಿ: 'ಸಂವಿಧಾನ, ಕೋರ್ಟ್ ಏನು ಹೇಳುತ್ತದೋ ಅದನ್ನು ಎಲ್ಲಾ ಧರ್ಮದವರು ಪಾಲಿಸಬೇಕು'