ತುಮಕೂರು: ಕಬ್ಬಿಣದ ಪೈಪ್‌ಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ಕಟ್ಟಿಗೆ ತುಂಬಿದ್ದ ಲಾರಿ ಡಿಕ್ಕಿ ಹೊಡೆದ ಘಟನೆ ಜಿಲ್ಲೆಯ ಶಿರಾ ತಾಲೂಕಿನ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಕಳ್ಳಂಬೆಳ್ಳ ಬಳಿ ನಡೆದಿದೆ. ಲಾರಿಗಳ ನಡುವೆ ಸಿಲುಕಿ ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದ ಚಾಲಕ ಮತ್ತು ಕ್ಲೀನರ್ನನ್ನು ಒಂದು ಗಂಟೆಗೂ ಹೆಚ್ಚುಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ.
ಅಪಘಾತ ನಡೆದ ವೇಳೆ ನಿಧಾನವಾಗಿ ಬೆಂಕಿ ಹೊತ್ತಿಕೊಳ್ಳುತ್ತಿತ್ತು. ಮಧ್ಯೆ ಸಿಲುಕಿದ್ದ ಲಾರಿ ಚಾಲಕ ಮತ್ತು ಕ್ಲೀನರ್ ಬೆಂಕಿಗೆ ಅಹುತಿಯಾಗುವ ಲಕ್ಷಣಗಳಿದ್ದವು. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಕಳ್ಳಂಬೆಳ್ಳ ಪೊಲೀಸರು ಮತ್ತು ಅಗ್ನಿ ಶಾಮಕದಳ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ವಿವರ..
ಎರಡು ಲಾರಿಗಳು ಬೆಂಗಳೂರು ಕಡೆಯಿಂದ ತೆರಳುತ್ತಿದ್ದವು. ಪೈಪ್ ತುಂಬಿಕೊಂಡು ಸಾಗುತ್ತಿದ್ದ ಲಾರಿಗೆ ಕಟ್ಟಿಗೆ ತುಂಬಿದ್ದ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಘಟನೆಗೆ ಕಟ್ಟಿಗೆ ಲಾರಿ ಚಾಲಕನ ಅಜಾಗರೂಕತೆಯೇ ಕಾರಣ ಎಂದು ಹೇಳಲಾಗ್ತಿದೆ.
ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಕಟ್ಟಿಗೆ ಲಾರಿ ಚಾಲಕನನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.