ತುಮಕೂರು: ಕಾಂಗ್ರೆಸ್ನಲ್ಲಿ ಸಂಪುಟ ರಚನೆ ಕಸರತ್ತು ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಗೆದ್ದಿರುವ ಏಳು ಮಂದಿ ಕಾಂಗ್ರೆಸ್ ಶಾಸಕರು ಸಚಿವ ಸಂಪುಟ ಸೇರಲು ಭಾರಿ ಕಸರತ್ತು ಆರಂಭಿಸಿದ್ದಾರೆ. ತುಮಕೂರು ಜಿಲ್ಲೆಯಿಂದಲೂ ಮಂತ್ರಿಗಿರಿ ರೇಸ್ನಲ್ಲಿ 5 ಕ್ಕೂ ಹೆಚ್ಚು ಶಾಸಕರು ಇದ್ದಾರೆ. 11 ರಲ್ಲಿ 7 ಕ್ಷೇತ್ರಗಳನ್ನು ಗೆದ್ದುಕೊಂಡಿರುವ ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್, ಮಾಜಿ ಸಚಿವರಾದ ಟಿ.ಬಿ. ಜಯಚಂದ್ರ, ಎಸ್.ಆರ್. ಶ್ರೀನಿವಾಸ್, ಶಾಸಕ ಕೆ.ಎನ್. ರಾಜಣ್ಣ, ಷಡಕ್ಷರಿ ನಡುವೆ ಮಂತ್ರಿಗಿರಿಗಾಗಿ ಪೈಪೋಟಿ ನಡೆಯುತ್ತಿದೆ.
ಮುಖ್ಯಮಂತ್ರಿ ರೇಸ್ನಲ್ಲಿದ್ದ ಕೊರಟಗೆರೆ ಶಾಸಕ ಪರಮೇಶ್ವರ್: ದಲಿತ ಸಿಎಂ ಎನ್ನುವ ಹೆಸರಿನಲ್ಲಿ ಸಿಎಂ ಗಾದಿ ಮೇಲೆ ಕಣ್ಣಿಟ್ಟಿದ್ದ ಕೊರಟಗೆರೆ ವಿಧಾನಸಭಾ ಶಾಸಕ ಜಿ.ಪರಮೇಶ್ವರ್ ಅವರು ಕೊನೆಗೆ ಡಿಸಿಎಂ ಸ್ಥಾನವೂ ಸಿಗದಿದ್ದಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಈಗ ಪ್ರಬಲ ಖಾತೆಯ ಮೇಲೆ ಕಣ್ಣಿಟ್ಟಿರುವ ಮಾಜಿ ಡಿಸಿಎಂ, ಮಾಜಿ ಸಚಿವ, ಶಿರಾ ಶಾಸಕ ಟಿ.ಬಿ. ಜಯಚಂದ್ರ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಕೊನೆಯ ಚುನಾವಣೆ ಎನ್ನುವ ನೆಪವೊಡ್ಡಿ ಮಂತ್ರಿಗಿರಿಗೆ ಲಾಬಿ ನಡೆಸಿದ್ದು, ಒಕ್ಕಲಿಗ ಕೋಟಾದಲ್ಲಿ ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ಜಯಚಂದ್ರ ಪ್ಲಾನ್ ರೂಪಿಸಿದ್ದಾರೆ.
ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಅವರೂ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದು, ಅದಲ್ಲದೆ ಇವರು ನಿಯೋಜಿತ ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲೂ ಗುರುತಿಸಿಕೊಂಡಿದ್ದಾರೆ. ನಾಯಕ ಕೋಟಾದ ಅಡಿ ಸಚಿವ ಸ್ಥಾನ ಪಡೆಯಲು ರಾಜಣ್ಣ ಕಸರತ್ತು ನಡೆಸುತ್ತಿದ್ದು, ಮಂತ್ರಿ ಸ್ಥಾನ ಬೇಕೇ ಬೇಕು ಎಂದು ಬಹಿರಂಗವಾಗಿಯೇ ಹೇಳಿಕೆ ಕೊಡುತ್ತಿದ್ದಾರೆ. ಅದರಲ್ಲಿಯೂ ಸಹಕಾರಿ ಇಲಾಖೆಯೇ ಬೇಕು ಎಂದು ಕೆ ಎನ್ ರಾಜಣ್ಣ ಪಟ್ಟು ಹಿಡಿದಿದ್ದಾರೆ.
ಜೆಡಿಎಸ್ ಪಕ್ಷವನ್ನು ಬಿಟ್ಟು ಈ ಬಾರಿ ಕಾಂಗ್ರೆಸ್ ಸೇರ್ಪಡೆಗೊಂಡು ಗುಬ್ಬಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಶಾಸಕ ಎಸ್.ಆರ್. ಶ್ರೀನಿವಾಸ್ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಒಕ್ಕಲಿಗ ಕೋಟಾದ ಅಡಿ ಸಚಿವ ಸ್ಥಾನ ನೀಡಲು ಎಸ್ ಆರ್ ಶ್ರೀನಿವಾಸ್ ಪಟ್ಟು ಮುಂದುವರೆಸಿದ್ದಾರೆ. ತಿಪಟೂರು ಶಾಸಕ ಷಡಕ್ಷರಿ ಅವರಿಂದಲೂ ಮಂತ್ರಿಗಿರಿಗೆ ಲಾಬಿ ನಡೆದಿದೆ. ಸಚಿವ ಬಿ.ಸಿ. ನಾಗೇಶ್ ಅವರಿಗೆ ಸೋಲುಣಿಸಿರುವ ಷಡಕ್ಷರಿ, ಲಿಂಗಾಯತ ಕೋಟಾದ ಅಡಿ ಸಚಿವ ಸ್ಥಾನ ನೀಡುವಂತೆ ಪಟ್ಟು ಮುಂದುವರೆಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಸಿಎಂ ಸ್ಥಾನಕ್ಕಾಗಿ ನಡೆಯುತ್ತಿದ್ದ ಹಗ್ಗಜಗ್ಗಾಟ ಕೊನೆಗೊಳ್ಳುತ್ತಿದ್ದಂತೆ ಇದೀಗ ಸಚಿವ ಸ್ಥಾನ ಆಕಾಂಕ್ಷಿಗಳು ಕಸರತ್ತು ಆರಂಭಿಸಿದ್ದಾರೆ. ನಾಳೆ ಸಿದ್ದರಾಮಯ್ಯ ಅವರು ಸಿಎಂ ಆಗಿ ಹಾಗೂ ಡಿಸಿಎಂ ಆಗಿ ಡಿ ಕೆ ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಸಚಿವ ಸಂಪುಟ ರಚನೆಯೂ ಆಗಬೇಕು. ಆ ಹಿನ್ನೆಲೆ ತಮ್ಮ ತಮ್ಮ ಜಾತಿ ಕೋಟಾದ ಅಡಿಯಲ್ಲಿ ತಮಗೇ ಇಂಥದ್ದೇ ಖಾತೆಗೆ ಸಚಿವನನ್ನಾಗಿ ಮಾಡಬೇಕು ಎಂದು ಕೆಲ ಶಾಸಕರು ಲಾಬಿ ನಡೆಸುತ್ತಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿ ದೆಸೆಯಿಂದಲೇ ಸಂಘಟನಾ ಚತುರ.. ಬಂಡೆಯಂತೆ ನಿಂತು ಕಾಂಗ್ರೆಸ್ ಗೆಲ್ಲಿಸಿದ ಡಿಕೆಶಿ ರಾಜಕೀಯ ಹಾದಿ