ತುಮಕೂರು: ಕುರುಬ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನದ ಮೂಲಕ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಡಿ. ವೆಂಕಟೇಶಮೂರ್ತಿ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸರ್ಕಾರ ಈ ಕೂಡಲೇ ನಿಗಮ ಘೋಷಣೆ ಮಾಡಿ 400 ಕೋಟಿ ಅನುದಾನವನ್ನು ನಿಗಮಕ್ಕೆ ನೀಡಬೇಕು, ಇಲ್ಲದಿದ್ದರೆ ಸಮುದಾಯದ ಎಲ್ಲಾ ಮುಖಂಡರು ಹಾಗೂ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ರಾಜಗೊಂಡ, ಗೊಂಡ, ಕಾಡುಕುರುಬ, ಜೇನುಕುರುಬ, ದಂತೆ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಕ್ಕೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಕೇಂದ್ರ ಸರ್ಕಾರ ಶಿಫಾರಸ್ಸನ್ನು ಒಪ್ಪಿಕೊಳ್ಳುವ ಮೂಲಕ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಒತ್ತಾಯಿಸಿದರು.
ನಂತರ ಮಾತನಾಡಿದ ಪರಿಶಿಷ್ಟ ಪಂಗಡ ಹೋರಾಟ ಸಮಿತಿ ಸಂಚಾಲಕ ಶಾಂತಪ್ಪ, ಸಿದ್ದರಾಮಯ್ಯ ಜೊತೆ ಮಾತುಕತೆ ಮೂಲಕ ಅವರಲ್ಲಿರುವ ಗೊಂದಲವನ್ನು ನಿವಾರಣೆ ಮಾಡುವ ಜೊತೆಗೆ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಪ್ರದೇಶ ಕುರುಬರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪಕ್ಷಬೇಧ ಮರೆತು ಕೆ.ಎಸ್. ಈಶ್ವರಪ್ಪ, ಎಂಟಿಬಿ ನಾಗರಾಜು, ವಿಶ್ವನಾಥ್ ಸೇರಿದಂತೆ ಸಮುದಾಯದ ಜನಪ್ರತಿನಿಧಿಗಳು ಹಾಗೂ ಸಮುದಾಯದ ಜಗದ್ಗುರುಗಳಾದ ಈಶ್ವರಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಯಲಿದೆ ಎಂದರು.