ತುಮಕೂರು: ಅನಾರೋಗ್ಯ ಕಾರಣದಿಂದ ಲಿಂಗೈಕ್ಯರಾದ ಕುಪ್ಪೂರು ಯತೀಶ್ವರ ಶಿವಾಚಾರ್ಯ ಸ್ವಾಮೀಜಿಯ ಅಂತಿಮ ವಿಧಿವಿಧಾನ ವೀರಶೈವ ಸಂಪ್ರದಾಯದಂತೆ ನೆರವೇರಿದೆ. ಕುಪ್ಪೂರು ಗದ್ದುಗೆ ಮಠದ ಆವರಣದಲ್ಲಿ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಅಂತಿಮ ಕಾರ್ಯಗಳು ನಡೆದವು.
ಬೆಳಗ್ಗೆಯಿಂದಲೂ ಪುರೋಹಿತರು ಹಾಗೂ ವಿವಿಧ ಮಠಾಧೀಶರು ಅಂತಿಮ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಅಂತ್ಯಸಂಸ್ಕಾರಕ್ಕೂ ಮುನ್ನ ಸ್ವಾಮೀಜಿ ಪಾರ್ಥಿವ ಶರೀರವನ್ನು ಮಠದ ಆವರಣದಲ್ಲಿ ಮೆರವಣಿಗೆ ಮಾಡಲಾಯಿತು.
ಉಸಿರಾಟ ಸಮಸ್ಯೆ ಹಾಗೂ ಜ್ವರದಿಂದ ಬಳಲುತ್ತಿದ್ದ ಕಾರಣ ಮುಂಜಾಗೃತೆ ಕ್ರಮವಾಗಿ ಕೋವಿಡ್ ನಿಯಮಾನುಸಾರ ಅಂತ್ಯಕ್ರಿಯೆ ನಡೆದಿದೆ. ಮುಂಚೂಣಿಯಲ್ಲಿದ್ದವರು ಪಿಪಿಇ ಕಿಟ್ ಧರಿಸಿ ಸ್ವಾಮೀಜಿಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು.
ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಉತ್ತರಾಧಿಕಾರಿಯ ಅವಶ್ಯವಿದ್ದು, 8ನೇ ತರಗತಿ ಓದುತ್ತಿದ್ದ ತೇಜಸ್ ಕುಮಾರ್ ಶಿವಾಚಾರ್ಯ ಸ್ವಾಮೀಜಿಯನ್ನು ಮುಂದಿನ ಉತ್ತರಾಧಿಕಾರಿಯಾಗಿ ನೇಮಿಸಲಾಗಿದೆ.
ಇದನ್ನೂ ಓದಿ: ಇಂದು ಸಿಎಂ ಜೊತೆ ಮತ್ತೊಂದು ಸುತ್ತಿನ ಮಾತುಕತೆ ಸಾಧ್ಯತೆ ಇದೆ: ಜಯಮೃತ್ಯುಂಜಯ ಶ್ರೀ