ತುಮಕೂರು: ಹಣದಾಸೆಗೆ ವ್ಯಕ್ತಿಯೊಬ್ಬ ಕೈಹಿಡಿದ ಪತ್ನಿಯನ್ನು ಕೊಂದಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಆದಿನಾಯಕನಹಳ್ಳಿಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕು ಕಲ್ಲಾಪುರದ ತಂದೆ, ತಾಯಿ ಇಲ್ಲದ ಸಾಹೀರಬಾನು ಕೊಲೆಯಾದ ಮಹಿಳೆ. ಈಕೆಯನ್ನು ತಿಪಟೂರಿನ ಆದಿನಾಯಕನಹಳ್ಳಿ ನಿವಾಸಿ ಜಾಫರ್ ಪಾಷ ಕೊಲೆಗೈದಿದ್ದಾನೆ ಎನ್ನಲಾಗಿದೆ. ಹಣದಾಸೆ ಮತ್ತು ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಹೆಂಡತಿಯನ್ನು ಹೊಡೆದು ಉಸಿರುಗಟ್ಟಿಸಿ ಕೊಂದುಹಾಕಿದ್ದಾನೆ ಎಂದು ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಹಿಂದೆ ಜಾಫರ್ ಪಾಷ ಮೊದಲ ಹೆಂಡತಿಯ ಜೊತೆ ಸಂಸಾರ ನಡೆಸಲಾಗದೆ ಆಕೆಗೆ ತಲಾಖ್ ನೀಡಿ ತಲೆ ಮರೆಸಿಕೊಂಡಿದ್ದ. ನಂತರ ಎರಡನೇ ಹೆಂಡತಿಯಾಗಿ ಸಾಹಿರ ಬಾನುವನ್ನು ಮದುವೆಯಾಗಿ ಕರೆತಂದಿದ್ದಾನೆ. ಈಕೆಯ ಜೊತೆ ನಾಲ್ಕೈದು ತಿಂಗಳು ಸಂಸಾರ ಸಾಗಿಸಿ ನಂತರ ಆಕೆಗೂ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ.
ಸಾಹೀರ ಎರಡನೇ ಹೆಂಡತಿಯಾಗಿ ಬಂದ ನಂತರ ಗ್ರಾಮದಲ್ಲಿ ಮನೆ ಕಟ್ಟಬೇಕು, ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದನಂತೆ. ಒತ್ತಡ ತಾಳಲಾರದೆ ಸಾಹಿರಾ, ತನ್ನ ತವರು ಮನೆಯಿಂದ 5 ಲಕ್ಷ ರೂ. ಹಣವನ್ನೂ ತಂದುಕೊಟ್ಟಿದ್ದಳಂತೆ. ಇಷ್ಟಕ್ಕೇ ಸುಮ್ಮನಾಗದ ಜಾಫರ್ ಇನ್ನೂ ಹಣ ತರಲು ಪೀಡಿಸುತ್ತಿದ್ದ ಎಂಬ ಮಾಹಿತಿ ದೊರೆತಿದೆ.
ಇದರ ಜೊತೆಗೆ ಎರಡನೇ ಹೆಂಡತಿಗೆ ತಿಳಿಯದಂತೆ ಈತ ಮೂರನೇ ಮದುವೆಯಾಗಿದ್ದಾನೆ. ಬಳಿಕ ಸಾಹೀರಳನ್ನು ಬಿಟ್ಟು ಮೂರನೇ ಹೆಂಡತಿಯ ಜೊತೆಗಿದ್ದವನು, ಮುಂದಿನ ಜೀವನಕ್ಕೆ ಎರಡನೇ ಹೆಂಡತಿ ಅಡ್ಡಿಯಾಗುತ್ತಾಳೆಂದು ಕೊಲೆ ಮಾಡಿರುವುದಾಗಿ ಸಂಬಂಧಿಕರು ತಿಳಿಸಿದ್ದಾರೆ.
ಇದರಿಂದ ಅನುಮಾನಗೊಂಡ ಸಾಹಿರಾಳ ಅಣ್ಣ ರಫೀಕ್, ತನ್ನ ತಂಗಿಯನ್ನು ಕೊಲೆ ಮಾಡಲಾಗಿದೆ ಎಂದು ತಿಪಟೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ತಿಪಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಾಫರ್ ಮತ್ತು ಅವನ ತಂದೆ, ತಾಯಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ.