ತುಮಕೂರು: ರಾಜ್ಯದಲ್ಲಿ ಕೊರೊನಾ ಶಂಕಿತರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಗಳ ಪರೀಕ್ಷಾ ವರದಿ ಸರಿಯಾದ ಸಮಯಕ್ಕೆ ದೊರೆಯದೆ ನೆಗೆಟಿವ್ ಇರುವ ಶವಗಳನ್ನು ಹಸ್ತಾಂತರ ಮಾಡಲು ಹೆಣಗಾಡುವಂತಾಗಿದೆ. ಇದರಿಂದ ಶವ ಪಡೆಯಲು ಸಂಬಂಧಿಕರು ಪರದಾಡುವಂತಾಗಿದೆ.
ತುಮಕೂರು ಜಿಲ್ಲೆಯ ಗಂಟಲು ದ್ರವ ಮಾದರಿಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತದೆ. ನಿತ್ಯ ನೂರಾರು ಮಾದರಿಗಳನ್ನು ಕಳುಹಿಸಿಕೊಡಲಾಗುತ್ತಿದೆ. ಹೀಗಾಗಿ ಸೋಂಕಿಲ್ಲದ ವ್ಯಕ್ತಿಯ ರಿಪೋರ್ಟ್ ಬರುವುದಕ್ಕೆ ಕೂಡ ಸಾಕಷ್ಟು ದಿನಗಳು ತೆಗೆದುಕೊಳ್ಳುತ್ತವೆ. ಇದರಿಂದಾಗಿ ಕೊರೊನಾ ಸೋಂಕು ಹೊರತುಪಡಿಸಿ ಸಹಜ ಸಾವು ಸಂಭವಿಸಿದ್ರೂ ಮೃತದೇಹವನ್ನು ವರದಿ ಬರುವುದಕ್ಕೂ ಮುನ್ನ ಸಂಬಂಧಿಕರಿಗೆ ಕೊಡಲು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸಾಧ್ಯವಾಗುತ್ತಿಲ್ಲ.
ಜಿಲ್ಲಾಸ್ಪತ್ರೆಯಿಂದ ಹೊರ ಕಳಿಸುವ ಎಲ್ಲಾ ಮೃತದೇಹಗಳಿಗೂ ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಅಕಸ್ಮಾತ್ ವರದಿಗೂ ಮುನ್ನ ಶವ ಪಡೆಯಲು ಸಂಬಂಧಿಕರು ಮುಂದಾದ್ರೆ ಕೊರೊನಾ ಸೋಂಕಿತರಿಗೆ ನಡೆಸಲಾಗುವ ಅಂತ್ಯ ಸಂಸ್ಕಾರದ ಪದ್ಧತಿ ಅನುಸರಿಸಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರು ಹೇಳುತ್ತಿದ್ದಾರೆ.
ತಾಲೂಕಿನ ಹೆಗ್ಗೆರೆ ಗ್ರಾಮದ ಮೂರ್ತಿ ಎಂಬ ಯುವಕ ಅತಿಯಾದ ಮದ್ಯ ಸೇವನೆಯಿಂದ ಮೇ. 12ರಂದು ಸಾವನ್ನಪ್ಪಿದ್ದ. ಈತನ ಗಂಟಲು ದ್ರವವನ್ನು ಪರೀಕ್ಷೆಗೆಂದು ಬೆಂಗಳೂರಿಗೆ ರವಾನೆ ಮಾಡಲಾಗಿತ್ತು. ಆದ್ರೆ ವರದಿ ಬರುವುದು ತಡವಾಯಿತು. ವರದಿ ಬರದೇ ಮೃತದೇಹವನ್ನ ನೀಡುಲು ಸಾಧ್ಯವಿಲ್ಲ. ಸರ್ಕಾರದ ನಿಯಮಾವಳಿ ಪ್ರಕಾರ ಅಂತ್ಯ ಸಂಸ್ಕಾರ ಮಾಡಬೇಕು. ಆದ್ರೆ ಇದಕ್ಕೆ ಸಂಬಂಧಿಕರು ಒಪ್ಪಲಿಲ್ಲ. ಆದಷ್ಟು ಬೇಗ ವರದಿ ಕೊಟ್ಟು ಮೃತದೇಹವನ್ನ ಕೊಡಿ ಎಂದು ಸಂಬಂಧಿಕರು ದುಂಬಾಲು ಬಿದ್ದಿದ್ದರು. ವರದಿ ಬಂದ ನಂತರವೇ ಮೃತದೇಹ ಹಸ್ತಾಂತರಿಸಲಾಯಿತು.