ತುಮಕೂರು: ಜಿಲ್ಲೆಯ ಗುಬ್ಬಿ, ತುರುವೇಕೆರೆ ಭಾಗದಲ್ಲಿ ನಿನ್ನೆ (ಅ.21) ರಾತ್ರಿ ವ್ಯಾಪಕ ಮಳೆಯಾಗಿದ್ದು, ಗುಬ್ಬಿ ತಾಲೂಕಿನ ಸಾಗರನಹಳ್ಳಿ ಗೇಟ್ ಬಳಿಯ ಹೇಮಾವತಿ ನಾಲೆಗೆ ಹೊಂದಿಕೊಂಡಂತಿರುವ ರಾಷ್ಟ್ರೀಯ ಹೆದ್ದಾರಿ 206ರ ರಸ್ತೆ ಕುಸಿಯುವ ಭೀತಿ ಎದುರಾಗಿದೆ.
ಸ್ಥಳೀಯರು ರಸ್ತೆಯ ಒಂದು ಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ರಸ್ತೆ ಪಕ್ಕದಲ್ಲಿ ಮರಳಿನ ಮೂಟೆಗಳನ್ನು ಇರಿಸಿದ್ದಾರೆ. ಗುಬ್ಬಿ ಹಾಗೂ ತುರುವೇಕೆರೆ, ಕುಣಿಗಲ್ ತಾಲೂಕಿನಲ್ಲಿ ರಾತ್ರಿ ವ್ಯಾಪಕ ಮಳೆಯಾದ ಹಿನ್ನೆಲೆಯಲ್ಲಿ ಹಳ್ಳಕೊಳ್ಳಗಳು ನೀರು ತುಂಬಿ ಹರಿಯುತ್ತಿದೆ. ತೆಂಗಿನ ತೋಟಗಳಲ್ಲಿ ಹಾಗೂ ಹೊಲಗದ್ದೆಗಳಲ್ಲಿ ಅಪಾರ ಪ್ರಮಾಣದ ನೀರು ನುಗ್ಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ದೊಣ್ಣೆರೆ ಗ್ರಾಮದ ಭರತ್ ಕುಮಾರ್ ಎಂಬುವರಿಗೆ ಸೇರಿದ ತೋಟಕ್ಕೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ತೋಟದಲ್ಲಿ ಸಂಗ್ರಹಿಸಲಾಗಿದ್ದ, ತೆಂಗಿನ ಕಾಯಿಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಗುಬ್ಬಿ, ಕಡಬ, ಸಿ.ಎಸ್. ಪುರ ಹೋಬಳಿಗಳಲ್ಲಿನ ಹಳ್ಳಗಳಲ್ಲಿ ನೀರಿನ ರಭಸ ಹೆಚ್ಚಾಗಿದೆ.