ಬೆಳಗಾವಿ: ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳನ್ನು ನಿಗದಿತ ಸಮಯಕ್ಕೆ ಮುಗಿಸದವರಿಗೆ ನೋಟಿಸ್ ನೀಡಿ ಸೂಕ್ತ ಕ್ರಮ ಕೈಗೊಳ್ಳುವುದರ ಜೊತೆಗೆ ಕೆಲಸದಿಂದ ವಜಾ ಮಾಡಬೇಕು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಎಚ್ಚರಿಸಿದರು.
ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಹಮ್ಮಿಕೊಂಡ ಮಹಾನಗರ ಪಾಲಿಕೆ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸ್ಮಾರ್ಟ್ ಸಿಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗೆ ಅರಣ್ಯ ಇಲಾಖೆಯವರು ತಕ್ಷಣವೇ ಅನುಮತಿ ನೀಡಬೇಕು ಎಂದರು.
ನಗರದ ಪ್ರದೇಶದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನೆಲದಡಿಯಲ್ಲಿ ವಿದ್ಯುತ್ ತಂತಿ ಹಾಕಲು ರಸ್ತೆ ಪಕ್ಕದಲ್ಲಿ ತಗ್ಗು ಗುಂಡಿಗಳನ್ನು ಅಗೆದು ಮುಚ್ಚದೇ ಇರುವ ಕುರಿತು ಆಕ್ರೋಶ ವ್ಯಕ್ತಪಡಿಸಿದ ಶಾಸಕ ಅನಿಲ ಬೆನಕೆ ಅಧಿಕಾರಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಧ್ವನಿಗೂಡಿಸಿದ ವಿಧಾನ ಪರಿಷತ್ ಸಚೇತಕ ಮಹಾಂತೇಶ ಕವಟಗಿಮಠ, ಹೆಸ್ಕಾಂ ಎಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾ ಮಂತ್ರಿಗಳ ಸಭೆ ಕರೆದಾಗ ಮಾಹಿತಿ ಇಲ್ಲದೇ ಬರುವುದು ಎಷ್ಟರಮಟ್ಟಿಗೆ ಸರಿ ಎಂದು ಬೇಸರ ವ್ಯಕ್ತಪಡಿಸಿದರು.
ಆಗ ಸಚಿವ ರಮೇಶ್ ಜಾರಕಿಹೊಳಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ್ ನಿಮ್ಮ ತಂಡ ಎಲ್ಲವೂ ಹೀಗೇನಾ? ಹೀಗಾದ್ರೆ ಹೇಗೆ ಕೆಲಸ ಮುಗಿಯೋದು? ಇನ್ಮೇಲೆ ಸ್ಥಳ ಪರಿಶೀಲನೆ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
ಅಲ್ಲದೇ ಈ ಕೂಡಲೇ ಅವುಗಳನ್ನು ಮುಚ್ಚಬೇಕು. ಜೊತೆಗೆ ಅತಂಹ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರಗೆ ಸೂಚನೆ ನೀಡಿದರು. ಇದಲ್ಲದೇ ಬುಡಾ ಅಡಿಯಲ್ಲಿರುವ ಪ್ರಕರಣಗಳನ್ನು ಇನ್ನೊಮ್ಮೆ ಪರಿಶೀಲನೆ ನಡೆಸಿ, ಪ್ರಕರಣಗಳು ಗೆಲ್ಲಲು ಒಳ್ಳೆಯ ವಕೀಲರನ್ನು ನೇಮಕ ಮಾಡಬೇಕು ಎಂದರು.
ಶಾಸಕ ಅನಿಲ ಬೆನಕೆ ಮಾತನಾಡಿ, ನಗರದ ಅನೇಕ ಕಡೆಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ. ಅಂಡರ್ ಕೇಬಲ್ ಕಾಮಗಾರಿ ವೇಳೆ ರಸ್ತೆಗಳನ್ನು ಅಗೆಯಲಾಗಿದ್ದು, ರಸ್ತೆಗಳನ್ನು ಸರಿಪಡಿಸುವ ಮೂಲಕ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದರು.
ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕೂರೇರ್ ಮಾತನಾಡಿ, ನಗರದಲ್ಲಿ 11 ಪ್ರತಿಶತ ಸ್ಥಳಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಗಾಗಿ ಸ್ಮಾರ್ಟ್ ಸಿಟಿ ಬೋರ್ಡ್ ರಚನೆ ಮಾಡಲಾಗಿದ್ದು, ಇಲ್ಲಿವರೆಗೆ 20 ಬೋರ್ಡ್ ಸಭೆ ಮಾಡಲಾಗಿದೆ.
ಇದಲ್ಲದೇ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸ್ಮಾರ್ಟ್ ಸಿಟಿ ಯೋಜನೆಗೆ 396 ಕೋಟಿ ರೂ. ಬಿಡುಗಡೆ ಆಗಿದ್ದು, ಇಲ್ಲಿಯವರೆಗೆ 230 ಕೋಟಿ ರೂ. ಖರ್ಚು ಮಾಡಲಾಗಿದೆ. 100 ಸ್ಮಾರ್ಟ್ ನರಗರಗಳ ಪೈಕಿ ಬೆಳಗಾವಿ 24ನೇ ಸ್ಥಾನದಲ್ಲಿದೆ ಎಂದರು.