ತುಮಕೂರು : ನನ್ನ ಜೀವನದಲ್ಲಿ 59 ವರ್ಷ ರಾಜಕಾರಣ ಮಾಡಿದ್ದೇನೆ, ಇಲ್ಲಿಗೆ ಬಂದು ಸೋತಿರಬಹುದು. ಆದರೆ ಮುಂದಿನ ಚುನಾವಣೆಯಲ್ಲಿ ಇದೇ ಕ್ಷೇತ್ರದಲ್ಲಿ ಗೆಲ್ಲುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್ .ಡಿ .ದೇವೇಗೌಡ ಹೇಳಿದರು.
ತಾಲೂಕಿನ ಅರೇಹಳ್ಳಿಯ ಚಿಕ್ಕಮ್ಮ ಮತ್ತು ದೊಡ್ಡಮ್ಮ ನೂತನ ದೇವಸ್ಥಾನ ಉದ್ಘಾಟಿಸಿ ಮಾತನಾಡಿದ ಅವರು, ಚಕ್ರವ್ಯೂಹದಲ್ಲಿ ನಾನು ಸಿಲುಕಿ ಸೋತಿದ್ದೇನೆ. ಈ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಇರಾದೆ ಇರಲಿಲ್ಲ. ಆದರೆ ವಿಧಿ ಎಳೆದುಕೊಂಡು ಬಂದಿತ್ತು. ಸೋಲು-ಗೆಲುವು ಮುಖ್ಯವಲ್ಲ. ಶತಾಯಗತಾಯ ಹೋರಾಟ ಮಾಡುವ ಮಣ್ಣಿನ ಮಗ ನಾನು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಲ್ಲಿ 11 ಸ್ಥಾನವನ್ನು ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿದ ಅವರು, 1989ರಲ್ಲಿ ನಡೆದ ಚುನಾವಣೆಯಲ್ಲಿ ನನ್ನ ಜೊತೆ ಇದ್ದವರೇ ನನ್ನನ್ನು ಸೋಲಿಸಿದರು. ಆದರೆ ನಾನು ಹೆದರಲಿಲ್ಲ. 1991ಕ್ಕೆ ಇದೇ ರೈತನ ಮಗ ದೇವೇಗೌಡ ಪಾರ್ಲಿಮೆಂಟ್ಗೆ ಹೋಗಿ ಹೋರಾಟ ಮಾಡುವಂತಹ ಶಕ್ತಿಯನ್ನು ಕೊಟ್ಟವರು ನನ್ನ ನಾಡಿನ ಜನ. ನಾನು ಅಧಿಕಾರವಧಿಯಲ್ಲಿ ದುಡ್ಡಿನ ರಾಜಕಾರಣ ಮಾಡಲಿಲ್ಲ. ಹೋರಾಟದಿಂದ ರಾಜಕಾರಣ ಮಾಡಿದ್ದೇನೆ ಎಂದು ತಮ್ಮ ರಾಜಕೀಯ ಜೀವನದ ನೆನಪುಗಳನ್ನು ಹಂಚಿಕೊಂಡರು.
ನನ್ನ ಮಗನನ್ನು ಮುಖ್ಯಮಂತ್ರಿ ಮಾಡಿ ಎಂದು ನಾನು ಯಾರ ಮನೆ ಮುಂದೆಯೂ ಹೋಗಿಲ್ಲ. ಅವರೇ ನಿಮ್ಮ ಮಗನೇ ಮುಖ್ಯಮಂತ್ರಿ ಆಗಬೇಕು ಎಂದಿದ್ದರು. ಒಬ್ಬ ಮುಖ್ಯಮಂತ್ರಿಗೆ 14 ತಿಂಗಳಲ್ಲಿ ಕೊಟ್ಟ ನೋವು ಈ ರಾಷ್ಟ್ರದ ಇತಿಹಾಸದಲ್ಲಿ ಇಲ್ಲ ಎಂದು ಹೇಳಿದ್ರು.
ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡಲ್ಲ ಎಂದಿದ್ದರು. ಆದರೆ ಶಾಸಕರ ಕ್ಷೇತ್ರಗಳಿಗೆ ಕೊಟ್ಟ ಅನುದಾನ ತಡೆ ಹಿಡಿದು ದ್ವೇಷದ ರಾಜಕಾರಣ ಮಾಡಿದ್ದಾರೆ ಎಂದು ದೂರಿದ್ರು.