ತುಮಕೂರು: ಶ್ರೀಗಂಧದ ಮರ ಕಡಿಯಲು ಬಂದಿದ್ದವರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿದ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಕಡಬ ಹೋಬಳಿಯ ಹರದೇವನು ಗುಡ್ಡದ ಬಳಿ ನಡೆದಿದೆ.
ಶ್ರೀಗಂಧ ಕಡಿಯಲು ಬಂದಿದ್ದ ತಮಿಳುನಾಡಿನ ಕೃಷ್ಣಗಿರಿ ಮೂಲದ 3 ಜನರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಫೈರಿಂಗ್ ಮಾಡಿದ್ದಾರೆ. ಕಾಲಿಗೆ ಗುಂಡು ತಗುಲಿದ ಪರಿಣಾಮ ಅಲ್ಲಿಂದ ತಪ್ಪಿಸಿಕೊಂಡು ಹೋಗಲಾರದೇ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದರು. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಅವರನ್ನು ಸುಲಭವಾಗಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.
ಮಚ್ಚು ಸೇರಿದಂತೆ ಶ್ರೀಗಂಧ ಮರ ಕಡಿಯಲು ಬೇಕಾದಂತಹ ಉಪಕರಣಗಳೊಂದಿಗೆ ಬಂದಿದ್ದ ಮರಗಳ್ಳರ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಗಾಯಗೊಂಡವರನ್ನು ತುಮಕೂರು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಇನ್ನು ಆಗಿಂದಾಗೆ ಜಿಲ್ಲೆಯಲ್ಲಿ ಶ್ರೀಗಂಧ ಮರ ಕಡಿಯಲು ಬರುತ್ತಿರುವ ಆಂಧ್ರ ಮೂಲದ ಬಹುತೇಕ ಮಂದಿ ಅರಣ್ಯ ಇಲಾಖೆಯ ಸಿಬ್ಬಂದಿಗಳ ಕೈಗೆ ಸಿಕ್ಕಿ ಬೀಳುತ್ತಿದ್ದಾರೆ. ಒಂದು ತಿಂಗಳ ಹಿಂದೆಯಷ್ಟೇ ಕುಣಿಗಲ್ ತಾಲೂಕಿನಲ್ಲಿ ಶ್ರೀಗಂಧ ಮರ ಕಡಿಯಲು ಬಂದಿದ್ದ ವ್ಯಕ್ತಿಯೊಬ್ಬನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿ ಕೊಂದು ಹಾಕಿದ್ದರು. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.