ತುಮಕೂರು: ಹೆಚ್.ಡಿ. ಕುಮಾರಸ್ವಾಮಿ ಒಬ್ಬ ಲಜ್ಜೆಗೆಟ್ಟ ಮಾಜಿ ಮುಖ್ಯಮಂತ್ರಿ ಆಗಿದ್ದಾರೆ. ಅಂತವರನ್ನು ನಮ್ಮ ದೇಶದಲ್ಲಿ ಮುಖ್ಯಮಂತ್ರಿಯಾಗಿ ಕಂಡಿರುವುದೇ ಜನರ ದೌರ್ಭಾಗ್ಯ ಎಂದು ಮಾಜಿ ಶಾಸಕ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಯಾವುದೋ ಒಂದು ಅನಿವಾರ್ಯ ಕಾರಣಕ್ಕೆ ಮುಖ್ಯಮಂತ್ರಿಯಾಗಿದ್ದರು. ...ಬಿಟ್ಟವರು ಊರಿಗೇ ದೊಡ್ಡವರು ಎಂಬ ರೀತಿಯಲ್ಲಿ ಅವರು ಮಾತನಾಡುತ್ತಿದ್ದಾರೆ ಎಂದು ಹೆಚ್ಡಿಕೆ ವಿರುದ್ಧ ಕಿಡಿಕಾರಿದರು.
ತುಮಕೂರು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನನ್ನ ಮಗ ರಾಜೇಂದ್ರ ಹಾಗೂ ನನ್ನ ಫೋನ್ ಸಂಭಾಷಣೆಯ ಕದ್ದಾಲಿಕೆ ಮಾಡಲಾಗುತ್ತಿತ್ತು. ಅದು ಹಾಗೆಯೇ ಮುಂದುವರೆದಿತ್ತು. ನನ್ನ ಫೋನ್ ಕದ್ದಾಲಿಕೆ ಬಗ್ಗೆ ನನಗೆ ಖಚಿತ ಮಾಹಿತಿ ಇತ್ತು. ನನ್ನದೇನು ಮುಚ್ಚುಮರೆಯಿಲ್ಲ, ಹಾಗಾಗಿ ನಾನು ಇದರ ಬಗ್ಗೆ ಹೆಚ್ಚು ಗಮನ ಹರಿಸಿರಲಿಲ್ಲ. ತುಮಕೂರು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನನ್ನ ಫೋನ್ ಕದ್ದಾಲಿಕೆ ಆರಂಭವಾಗಿದ್ದು ಹಾಗೆ ಸರ್ಕಾರದ ಗೊಂದಲಗಳ ಸಂದರ್ಭದಲ್ಲಿ ಕೂಡ ಅದು ಮುಂದುವರೆದಿತ್ತು ಎಂದು ಅವರು ಹೇಳಿದರು.
ಟೆಲಿಫೋನ್ ಕದ್ದಾಲಿಕೆ ವಿಷಯ ಮೊದಲನೆಯದ್ದಲ್ಲ. ಅಲ್ಲದೆ, ಇದಕ್ಕೆ ಒಂದು ಅಂತ್ಯ ಹಾಡಬೇಕಾಗಿದೆ ಎಂದರು. ಸಿಬಿಐ ತನಿಖೆಗೆ ವಹಿಸಿರುವುದು ಸ್ವಾಗತಾರ್ಹ ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕಿದೆ. ಈ ಮೂಲಕ ಭವಿಷ್ಯದಲ್ಲಿ ಅಧಿಕಾರಿಗಳು ಇರಬಹುದು ರಾಜಕಾರಣಿಗಳಿರಬಹುದು ಯಾರೂ ಕೂಡ ಫೋನ್ ಕದ್ದಾಲಿಕೆ ವಿಷಯಕ್ಕೆ ಕೈ ಹಾಕಬಾರದು ಎಂಬ ಸಂದೇಶ ಬರಬೇಕಿದೆ ಎಂದು ಹೇಳಿದರು.