ತುಮಕೂರು: ಮದ್ಯಕ್ಕಾಗಿ ಗಡಿ ದಾಟಿ ನುಗ್ಗಿ ಬರುತ್ತಿದ್ದ ಸೀಮಾಂಧ್ರದ ಜನರಿಂದ ಕ್ರಿಮಿನಲ್ ಚಟುವಟಿಕೆಗಳ ನಡೆಯುತ್ತಿದ್ದ ಆರೋಪವಿದೆ. ಆದ್ರೆ ಲಾಕ್ಡೌನ್ನಿಂದ ಇದಕ್ಕೆಲ್ಲಾ ಬ್ರೇಕ್ ಬಿದ್ದಿತ್ತು. ಹೀಗಾಗಿ ಮದ್ಯ ಮಾರಾಟಕ್ಕೆ ಅವಕಾಶ ಕೊಡಬಾರದು ಎಂದು ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕಡಗತ್ತೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸೀಮಾಂಧ್ರಕ್ಕೆ ಹೊಂದಿಕೊಂಡಿರುವ ಈ ಗಡಿ ಗ್ರಾಮ ಕಡಗತ್ತೂರಿನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟರೆ ಗ್ರಾಮದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಲಿದೆ. ಆಂಧ್ರದಿಂದ ಬರುವ ಜನರು ಕುಡಿದ ಅಮಲಿನಲ್ಲಿ ಹೊಲ ಗದ್ದೆಗಳಲ್ಲಿ ಕೂಲಿ ಕೆಲಸ ಮಾಡುವ ಮಹಿಳೆಯರ ಮೇಲೆ ದೌರ್ಜನ್ಯ ಹಾಗೂ ಲೈಂಗಿಕ ಕಿರುಕುಳ ನೀಡುತ್ತಾರೆ. ಜತೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಹಾಗಾಗಿ ಗ್ರಾಮದಲ್ಲಿರುವ ಎಂಎಸ್‌ಐಎಲ್ ಮಳಿಗೆ ತೆರೆಯದಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೇ ಎಂಎಸ್‌ಐಎಲ್ ಮಳಿಗೆ ಎದುರು ಕಲ್ಲು ಮುಳ್ಳು ಅಡ್ಡ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಿಂಗಳಿಂದ ಈ ಭಾಗದ ಜನತೆ ನೆಮ್ಮದಿಯಿಂದ ಬದುಕುತ್ತಿದ್ದರು. ಮದ್ಯದಂಗಡಿ ತೆರೆದರೆ ನೂರಾರು ಕುಟುಂಬಗಳು ಬೀದಿಗೆ ಬೀಳುತ್ತವೆ. ಇಲ್ಲಿನ ಎಂಎಸ್‌ಐಎಲ್‌ನಿಂದ ಸುತ್ತಮುತ್ತಲ ರೈತರ ಜಮೀನಿನಲ್ಲಿ ಪರಿಸರ ಹಾನಿಯಾಗುತ್ತದೆ. ಯಾವುದೇ ಕಾರಣಕ್ಕೂ ನಾವು ಎಂಎಸ್‌ಐಲ್ ತೆರೆಯಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.