ತುಮಕೂರು: ಹುಟ್ಟಿದ ನಾಲ್ಕೇ ದಿನಕ್ಕೆ ಅನಾರೋಗ್ಯದಿಂದ ಮೃತಪಟ್ಟ ಮಗುವಿನ ಶವ ಅಂತ್ಯಸಂಸ್ಕಾರಕ್ಕೆ ಊರಿಗೆ ತೆಗೆದುಕೊಂಡು ಹೋಗಲು ವಾಹನ ವ್ಯವಸ್ಥೆ ಇಲ್ಲದೇ ಕುಟುಂಬವೊಂದು ಪರದಾಡಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಬಡತನವೇ ಹಾಸುಹೊಕ್ಕಿದ್ದ ಆ ಹೆತ್ತವರಿಗೆ ಶವ ತೆಗೆದುಕೊಂಡು ಹೋಗಲು ಕೈಯಲ್ಲಿ ಹಣ ಇಲ್ಲದಂತಾಗಿ ಕುಟುಂಬ ತುಮಕೂರಿನ ಬಸ್ ನಿಲ್ದಾಣದಲ್ಲಿ ದಿಕ್ಕುತೋಚದೇ ಕುಳಿತಿತ್ತು.
ದಾವಣಗೆರೆಯ ಗೋಪನಾಳ್ ಗ್ರಾಮದ ನಿವಾಸಿ ಮಂಜುನಾಥ್ ಹೊಟ್ಟೆಪಾಡಿಗಾಗಿ ತುಮಕೂರಿಗೆ ವಲಸೆ ಬಂದಿದ್ದರು. ಮಂಜುನಾಥ್ ಹಾಗೂ ಗೌರಮ್ಮ ದಂಪತಿಗೆ ಸೆಪ್ಟೆಂಬರ್30 ರಂದು ಜಿಲ್ಲಾಸ್ಪತ್ರೆಯಲ್ಲಿ ಗಂಡು ಮಗು ಜನಿಸಿತ್ತು. ಅನಾರೋಗ್ಯದಿಂದ ಸೋಮವಾರ ಮುಂಜಾನೆ 4 ಗಂಟೆಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ದಂಪತಿಯ ಮಗು ಅಸುನೀಗಿದೆ. ಮಗುವಿನ ಮೃತದೇಹ ತೆಗೆದುಕೊಂಡು ಹೋಗುವಂತೆ ವೈದ್ಯರು ಹೇಳಿದ್ದಾರೆ.
ಸರ್ಕಾರಿ ಆ್ಯಂಬುಲೆನ್ಸ್ ನಿಯಮದಂತೆ 40 ಕಿಲೋ ಮೀಟರ್ ಮೀರಿ ಹೋಗುವಂತಿಲ್ಲ. ಹೀಗಾಗಿ ಆಸ್ಪತ್ರೆಯ ಆ್ಯಂಬುಲೆನ್ಸ್ ನೀಡಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದರು. ಇತ್ತ ಖಾಸಗಿ ಆ್ಯಂಬುಲೆನ್ಸ್‌ನಲ್ಲಿ ಮಗುವಿನ ಮೃತದೇಹ ತೆಗೆದುಕೊಂಡು ಹೋಗಲು ಕುಟುಂಬಸ್ಥರು ಅಶಕ್ತರಾಗಿದ್ದಾರು. ಹೀಗಾಗಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಗುವಿನ ಮೃತದೇಹ ತೆಗೆದುಕೊಂಡು ಹೋಗಲು ಮುಂದಾಗಿದ್ದಾರೆ. ಮಗುವಿನ ಶವ ತೆಗೆದುಕೊಂಡು ಹೋಗಲು ಅನುಮತಿ ಸಿಗದ ಕಾರಣ, ಸ್ವಂತ ಊರಿಗೆ ಹೋಗಲು ದಂಪತಿ ಪರದಾಡುತ್ತಿದ್ದರು.
ದಿಕ್ಕು ಕಾಣದೇ ಬಸ್ ನಿಲ್ದಾಣದಲ್ಲಿ ಕುಳಿತು ಕಣ್ಣೀರಿಡುತ್ತಿದ್ದ ದಂಪತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಮುಖ್ಯಮಂತ್ರಿಗಳ ಕಚೇರಿಗೆ ಮಾಹಿತಿ ತಿಳಿಯುತ್ತದೆ. ಕೂಡಲೇ ಕಚೇರಿ ಜಿಲ್ಲಾಸ್ಪತ್ರೆಗೆ ಸಹಕಾರ ನೀದುವಂತೆ ನಿರ್ದೇಶನ ಮಾಡಿತ್ತು. ಇದರಿಂದ ಜಿಲ್ಲಾಸ್ಪತ್ರೆ ಖಾಸಗಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ ಮಗುವನ್ನು ಊರಿಗೆ ಸಾಗಿಸಲು ನೆರವು ನೀಡಿತು. ಮಂಜುನಾಥ್ ದಂಪತಿಯು ತಮ್ಮ ಮಗುವಿನ ಶವದೊಂದಿಗೆ ಸ್ವಗ್ರಾಮ ಕ್ಷೇಮವಾಗಿ ತಲುಪಿದ್ದಾರೆ ಎಂದು ಅವರು ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ. ವೀಣಾ ತಿಳಿಸಿದ್ದಾರೆ.
ಇದನ್ನೂ ಓದಿ : ರೊಟ್ಟಿ ಮಾಡುವಾಗ ಮನೆಗೋಡೆ ಕುಸಿತ: ಅವಶೇಷಗಳಡಿ ಸಿಲುಕಿದ್ದ ಮಹಿಳೆಯ ರಕ್ಷಣೆ.. ವಿಡಿಯೋ!