ತುಮಕೂರು: ಮೆರ್ಚೆಂಟ್ಸ್ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ(ಟಿಎಂಸಿಸಿ) ಅಧ್ಯಕ್ಷ ಡಾ.ಎನ್.ಎಸ್ ಜಯಕುಮಾರ್ ಅವರಿಗೆ 66 ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ 'ಕರ್ನಾಟಕ ಸಹಕಾರ ಪ್ರಶಸ್ತಿ' ಲಭಿಸಿದ ಹಿನ್ನೆಲೆಯಲ್ಲಿ ತುಮಕೂರಿನ ನಾಗರಿಕ ಸಮಿತಿ, ಕ್ರೀಡಾಸಂಸ್ಥೆ, ಡಾ. ಎನ್.ಎಸ್. ಜಯಕುಮಾರ್ ಅಭಿಮಾನಿ ಬಳಗದಿಂದ ಡಿ.13ರಂದು ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ನಾಗರಿಕ ಸಮಿತಿ ಅಧ್ಯಕ್ಷ ಧನಿಯ ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರಿನಲ್ಲಿ ಡಾ.ಎನ್.ಎಸ್ ಜಯಕುಮಾರ್ ಮಾಡಿದಂತಹ ಸಾಮಾಜಿಕ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಅವರಿಗೆ 'ಕರ್ನಾಟಕ ಸಹಕಾರ ಪ್ರಶಸ್ತಿ' ದೊರೆತಿರುವುದು ಸಂತೋಷದ ವಿಚಾರ. ಈ ಹಿನ್ನೆಲೆಯಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಸನ್ಮಾನಿಸಲಿದ್ದಾರೆ ಎಂದರು.