ತುಮಕೂರು: ಊರ ಹೊರಗಿನ ಗುಡಿಸಲಿನಲ್ಲಿ ಬಾಣಂತಿಯೊಬ್ಬಳು ಆಗ ತಾನೆ ಹುಟ್ಟಿದ ಮಗು ಜೊತೆ ವಾಸ ಮಾಡುತ್ತಿದ್ದಾರೆ. ಇದು ಕಾಡುಗೊಲ್ಲ ಸಮುದಾಯದ ಆಚರಣೆ. ಇಂಥ ಆಚರಣೆಯನ್ನು ಇಂದಿಗೂ ಈ ಸಮುದಾಯ ನಡೆಸಿಕೊಂಡು ಬರುತ್ತಿದೆ. ತುಮಕೂರು ಸಮೀಪದ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಇದಕ್ಕೊಂದು ಉದಾಹರಣೆ ದೊರೆಯಿತು.
ಊರ ಹೊರಗಿರುವ ಗುಡಿಸಲಿನಲ್ಲಿ ವಾಸಿಸುತ್ತಿರುವ ವಸಂತ ಎಂಬ ಬಾಣಂತಿಯದ್ದು ನರಕಯಾತನೆಯಾಗಿದೆ. ತುಂತುರು ಮಳೆ, ಚಳಿ, ಗಾಳಿಯ ನಡುವೆ ಗುಡಿಸಲಿನಲ್ಲಿ ಈಕೆ ಇದ್ದಾರೆ. ಐದು ದಿನಗಳ ಹಿಂದೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಇವರಿಗೆ ಹೆರಿಗೆ ಆಗಿತ್ತು. ಹೆರಿಗೆ ಮುಗಿಸಿ ಮರಳಿ ಗ್ರಾಮಕ್ಕೆ ಬಂದವರನ್ನು ಪೋಷಕರೇ ಮನೆಗೆ ಸೇರಿಸಿಕೊಂಡಿಲ್ಲ. ಊರ ಹೊರಗಿನ ಗುಡಿಸಿಲಿಗೆ ಇವರನ್ನು ಕಳುಹಿಸಿದ್ದಾರೆ. ಇದೀಗ ಸಣ್ಣ ಗುಡಿಸಲಿನಲ್ಲಿ ಬಾಣಂತಿ ಮತ್ತು ಮಗು ವಾಸವಿದ್ದಾರೆ. ಇವರ ಸಂಪ್ರದಾಯದಂತೆ ಎರಡು ತಿಂಗಳುಗಳ ಕಾಲ ಈ ಗುಡಿಸಲಿನಲ್ಲಿಯೇ ಇರಬೇಕಾಗಿದೆ.
"ನಮ್ಮ ದೇವರಿಗೆ ಸೂತಕ ಆಗಲ್ಲ, ಹಾಗಾಗಿ ನಾವು ಮನೆಯೊಳಗೆ ಬಿಟ್ಟುಕೊಳ್ಳುವುದಿಲ್ಲ" ಎನ್ನುತ್ತಾರೆ ಗೊಲ್ಲ ಸಮುದಾಯದವರು. ಸೂತಕದ ಬಾಣಂತಿ ಊರಿಗೆ ಬಂದರೆ ಕೇಡು. ಜುಂಜಪ್ಪ ಹಾಗೂ ಯತ್ತಪ್ಪ ದೇವರಿಗೆ ಆಗಲ್ಲ ಎಂಬುದು ಗ್ರಾಮಸ್ಥರ ನಂಬಿಕೆ. ಈ ಮೂಢ ನಂಬಿಕೆಗಳ ನಡುವೆ ಬಾಣಂತಿಯ ಸಂಕಷ್ಟ ಯಾರಿಗೂ ಕೇಳದಾಗಿದೆ.
ದೇಶದ ವಿವಿಧೆಡೆ ವರದಿಯಾದ ಮೂಢನಂಬಿಕೆ ಪ್ರಕರಣಗಳು.. : ಉತ್ತರ ಪ್ರದೇಶದಲ್ಲಿ ತಂತ್ರ ವಿದ್ಯೆ ವಿಚಾರದಲ್ಲಿ ಆಸೆ ಪೂರೈಸಿಕೊಳ್ಳಲು ಮಹಿಳೆಯೊಬ್ಬಳ್ಳು ತನ್ನ ನಾಲ್ಕು ತಿಂಗಳ ಮಗುವನ್ನು ಬಲಿ ಕೊಟ್ಟಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ದೇವಿಯ ಮೂರ್ತಿ ಮುಂದೆಯೇ ಪುಟ್ಟ ಮಗುವನ್ನು ಆಕೆ ಕೊಚ್ಚಿ ಕೊಲೆ ಮಾಡಿದ್ದಳು. ತಂತ್ರ-ಮಂತ್ರ ವಿದ್ಯೆಯ ಮೂಢನಂಬಿಕೆಗೆ ಕಟ್ಟುಬಿದ್ದು, ಮಹಿಳೆ ದುಷ್ಕೃತ್ಯ ಎಸಗಿದ್ದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ.
ಕಪ್ಪು ಬೆಕ್ಕು ಅಪಶಕುನ ಎಂದು ಬಲಿ : ಮೂಢನಂಬಿಕೆಗೆ ಮೂಕ ಪ್ರಾಣಿ ಬಲಿಯಾಗಿರುವ ಘಟನೆ ದೆಹಲಿಯಲ್ಲಿ ಕೆಲದಿನಗಳ ಹಿಂದೆ ವರದಿಯಾಗಿತ್ತು. ಅಪಾರ್ಟ್ಮೆಂಟ್ವೊಂದರಲ್ಲಿ 10 ರಿಂದ 12 ಬೆಕ್ಕಿನ ಮರಿಗಳು ವಾಸವಾಗಿದ್ದವು. ಆದರೆ ಎಲ್ಲವೂ ಏಕಾಏಕಿ ಸಾವನ್ನಪ್ಪಿದ್ದವು. ಕಪ್ಪು ಬೆಕ್ಕುಗಳು ಅಪಶಕುನ ಎಂಬ ಮೂಢನಂಬಿಕೆಯಿಂದ ಆಹಾರದಲ್ಲಿ ವಿಷ ಹಾಕಿ ಕೊಂದಿರುವುದು ಬಳಿಕ ಗೊತ್ತಾಗಿದೆ. ಎರಡು ದಿನದಲ್ಲಿ ಬೆಕ್ಕುಗಳು ಅಲ್ಲಲ್ಲಿ ಸತ್ತು ಬಿದ್ದಿರುವುದನ್ನು ಕಂಡ ಕೆಲವು ಪ್ರಾಣಿ ಪ್ರೇಮಿಗಳು ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ: ರಾಜಧಾನಿಯಲ್ಲಿ ಬೆಕ್ಕುಗಳ ಸಾವು: ಮೂಢನಂಬಿಕೆಗೆ ಬಲಿಯಾದವೇ ಮಾರ್ಜಾಲಗಳು?