ತುಮಕೂರು: ಆಂಧ್ರಪ್ರದೇಶದ ಇಂದೂಪುರಕ್ಕೆ ಹೋಗಿಬಂದಿದ್ದ ಶಿರಾ ನಗರದ ವ್ಯಕ್ತಿಯೊಬ್ಬನಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 34 ಕ್ಕೆ ಏರಿಕೆಯಾಗಿದೆ.
ಈ ಪೈಕಿ 28 ಜನರು ಈಗಾಗಲೇ ಗುಣಮುಖರಾಗಿದ್ದಾರೆ. ಸುಮಾರು 40 ವರ್ಷ ವಯಸ್ಸಿನ ವ್ಯಕ್ತಿ ಮೇ 30ರಂದು ಆಂಧ್ರಪ್ರದೇಶದ ಇಂದೂಪುರಕ್ಕೆ ಬೈಕಿನಲ್ಲಿ ಹೋಗಿದ್ದರು. ಜೂನ್ 2ರಂದು ವಾಪಸ್ ಶಿರಾ ನಗರಕ್ಕೆ ಬಂದಿದ್ದರು. ಬಂದ ನಂತರ ತೀವ್ರ ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ಹೀಗಾಗಿ ಜೂನ್ 6ರಂದು ಇವರ ಗಂಟಲು ದ್ರವ ಪರೀಕ್ಷೆ ತೆಗೆಯಲಾಗಿತ್ತು.
ಜೂನ್ 8ರಂದು ಸೋಂಕು ದೃಢಪಟ್ಟಿತ್ತು. ಹೀಗಾಗಿ ಕೋವಿಡ್19 ಆಸ್ಪತ್ರೆಗೆ ವ್ಯಕ್ತಿಯನ್ನು ದಾಖಲು ಮಾಡಲಾಗಿದೆ. ಸೋಂಕಿತನ ಪ್ರಾರ್ಥಮಿಕ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ.
ತುಮಕೂರು ಜಿಲ್ಲೆಯಲ್ಲಿ 2203 ಮಂದಿ ಕ್ವಾರಂಟೈನ್ನಲ್ಲಿದ್ದಾರೆ. ಇನ್ನು 26 ಮಂದಿ ಕೊರೊನಾ ಶಂಕಿತರೆಂದು ಗುರುತಿಸಿ ಕೋವಿಡ್19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ನಾಲ್ವರು ಕೊರೊನಾ ಸೋಂಕಿತರಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ತುಮಕೂರು ಜಿಲ್ಲೆಯಲ್ಲಿ ಇದುವರೆಗೂ 11,186 ಜನರಿಗೆ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು ಅದರಲ್ಲಿ 10,355 ಮಂದಿಗೆ ನೆಗೆಟಿವ್ ಬಂದಿದೆ. 451 ಮಂದಿಯ ಸ್ಯಾಂಪಲ್ಗಳ ವರದಿ ಬರಬೇಕಿದೆ. 346 ಮಂದಿಯ ಸ್ಯಾಂಪಲ್ಗಳ ವರದಿಯನ್ನು ತಿರಸ್ಕರಿಸಿ ಪುನಃ ಪರೀಕ್ಷೆಗೆ ಕಳುಹಿಸಲಾಗಿದೆ.