ತುಮಕೂರು: ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಶಾಸಕರುಗಳ ನಡುವೆ ಪೈಪೋಟಿ ಇದ್ದು ಹೆಚ್.ಕೆ. ಪಾಟೀಲ್, ಸಿದ್ದರಾಮಯ್ಯ ಸೇರಿದಂತೆ ಇತರರು ಆಕಾಂಕ್ಷಿಗಳಾಗಿದ್ದಾರೆ. ಆದರೆ ಯಾರಿಗೆ ಆ ಸ್ಥಾನ ನೀಡಬೇಕು ಎಂಬುದು ಹೈಕಮಾಂಡ್ನ ತೀರ್ಮಾನವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ನೇಮಕ ಮಾಡುವುದು ಹೈಕಮಾಂಡ್ಗೆ ಬಿಟ್ಟ ವಿಚಾರ. ಹೈಕಮಾಂಡ್ ನಮಗೆ ಯಾವ ಜವಾಬ್ದಾರಿ ನೀಡುತ್ತದೆಯೋ ಅದನ್ನು ನಿಭಾಯಿಸುತ್ತೇವೆ. ನಾವು ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ, ನಮ್ಮಲ್ಲಿ ಯಾರಿಗೆ ವಿಪಕ್ಷ ಸ್ಥಾನ ಸಿಕ್ಕರೂ ನಮ್ಮಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಸೋನಿಯಾ ಗಾಂಧಿಯವರು ಪಕ್ಷ ಸಂಘಟನೆಗೆ ಸೂಚನೆ ನೀಡಿದ್ದಾರೆ. ಅದರಂತೆ ಪಕ್ಷ ಸಂಘಟನೆ ಮಾಡಲಾಗುವುದು.
ಹೈಕಮಾಂಡ್ ಸೂಚನೆಯಂತೆ ಸತ್ಯಶೋಧನಾ ಸಮಿತಿಯು ಇಡೀ ರಾಜ್ಯ ಸಂಚರಿಸಿ ಆಯಾ ಜಿಲ್ಲೆಗಳಲ್ಲಿ ಪಕ್ಷದ ಸ್ಥಿತಿಗಳು ಹೇಗಿವೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣ ಏನು ಎಂಬುದರ ಬಗ್ಗೆ ವರದಿ ನೀಡಲಾಗಿದೆ. ಈ ವರದಿಯ ಬಗ್ಗೆ ಸೆಪ್ಟೆಂಬರ್ 18ರಂದು ಸಭೆ ಕರೆಯಲಾಗಿದ್ದು, ನಂತರ ವರಿಷ್ಠರ ತೀರ್ಮಾನದಂತೆ ಅಗತ್ಯವಿದ್ದಲ್ಲಿ ಕ್ರಮ ತೆಗೆದು ಕೊಳ್ಳಲಾಗುವುದು. ಇದರಲ್ಲಿ ಒಟ್ಟಾರೆಯಾಗಿ ರಾಜ್ಯದ ಬಗ್ಗೆ ಚರ್ಚೆ ಮಾಡಲಾಗುತ್ತದೆಯೋ ಅಥವಾ ತುಮಕೂರಿನ ಬಗ್ಗೆ ಪ್ರತ್ಯೇಕವಾಗಿ ಚರ್ಚೆ ಮಾಡಲಾಗುತ್ತದೆಯೋ ಎಂಬುದರ ಬಗ್ಗೆ ತಿಳಿದಿಲ್ಲ ಎಂದರು.
ರಾಜ್ಯದ ಅರ್ಧದಷ್ಟು ಜಿಲ್ಲೆಗಳಲ್ಲಿ ನೆರೆ ಬಂದು ಲಕ್ಷಾಂತರ ಜನರು ಆಸ್ತಿಪಾಸ್ತಿಯನ್ನು ಕಳೆದುಕೊಂಡಿದ್ದಾರೆ. ಅವರಿಗೆ ಪರಿಹಾರ ನೀಡುವ ಬಗ್ಗೆ ಕೇಳುವವರು ಒಬ್ಬರು ಇಲ್ಲ. ನೆರೆ ಪರಿಹಾರದ ಬಗ್ಗೆ ಕೇಳಿದರೆ ನೀವೇನಾದರೂ ಕೊಟ್ಟಿದ್ದೀರಾ ಎಂದು ಮರು ಪ್ರಶ್ನೆ ಕೇಳುತ್ತಾರೆ. ಸದ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಇಂತಹ ತುರ್ತು ಪರಿಸ್ಥಿತಿಯಲ್ಲಾದರೂ ₹ 500 ಕೋಟಿ ಮುಂಗಡವಾಗಿ ಬಿಡುಗಡೆ ಮಾಡಲು ಆಗುವುದಿಲ್ಲವೇ? ಈಗಿನ ತುರ್ತು ಪರಿಸ್ಥಿತಿಯಲ್ಲಿ ಹಣ ಬಿಡುಗಡೆ ಮಾಡಿ, ನಂತರ ಲೆಕ್ಕ ವ್ಯವಹಾರಗಳನ್ನು ಮಾಡಿದರೆ ಆಯಿತು ಎಂದರು.
ಮೈತ್ರಿ ಸರ್ಕಾರದ ವೇಳೆಯಲ್ಲಿ 17 ಶಾಸಕರನ್ನು ರಾಜೀನಾಮೆ ಕೊಡಿಸಿ, ಬಿಜೆಪಿಯವರು ಸರ್ಕಾರ ರಚನೆ ಮಾಡಿದರು. ಆ ವೇಳೆ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಕಾನೂನು ಬಾಹಿರ ಎಂದು ಹೇಳಿದರೂ ಬಿಜೆಪಿಯವರು ಒಪ್ಪಲಿಲ್ಲ. ಕಾನೂನು ಬಾಹಿರ ಅಲ್ಲ ಎಂದು ಹೇಳಿಕೆ ನೀಡಿ ಅಧಿಕಾರ ನಡೆಸಲು ಮುಂದಾದರು. ಹೀಗಾದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುವುದಿಲ್ಲವೇ? ಮತ ನೀಡಿ ಚುನಾಯಿಸಿದ ಮತದಾರರಿಗೆ ಏನು ಉತ್ತರ ಕೊಡುತ್ತಾರೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬಂದರೂ ಬರಬಹುದು ಅದಕ್ಕೆ ನಾವು ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಗ್ರಾಮೀಣ ಮಟ್ಟದಿಂದ ಪಕ್ಷ ಸಂಘಟನೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಜಯ ತಂದು ಕೊಡುವ ಪ್ರಯತ್ನ ಮಾಡುತ್ತೇವೆ ಎಂದರು.