ತುಮಕೂರು : ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು ರೆಮಿಡಿಸಿವಿರ್, ಬ್ಲಡ್ ಥಿನ್ನರ್, ಸ್ಟಿರಾಡ್ಸ್ಗಳನ್ನು ಸಂಗ್ರಹ ಮಾಡಿಟ್ಟುಕೊಳ್ಳಬೇಕಾಗಿದೆ.
ರೆಮಿಡಿಸಿವಿಅರ್ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದರ ಬಗ್ಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಇಂದು ಕಾಂಗ್ರೆಸ್ ನಿಯೋಗ ತುಮಕೂರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪನವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿದರು. ಅಲ್ಲದೆ ಕಾಂಗ್ರೆಸ್ ಪಕ್ಷದ ವತಿಯಿಂದ ತುಮಕೂರು ನಗರದಲ್ಲಿ ಸುಮಾರು 40 ಬೆಡ್‌ಗಳ ಆರಂಭಕ್ಕೆ ಸಹಕಾರವನ್ನು ಮುರುಳೀಧರ್ ಹಾಲಪ್ಪ ಕೋರಿದರು.
ಕೋವಿಡ್ ಟೆಸ್ಟ್ ಮಾಡಿಸಿದ ಮೂರ್‍ನಾಲ್ಕು ದಿನಗಳ ನಂತರ ವರದಿ ಬರುತ್ತಿದೆ. ಇದು ತಡವಾಗುತ್ತಿರುವ ಹಿನ್ನೆಲೆ ಸರಿಯಾದ ಸಮಯದಲ್ಲಿ ಸೋಂಕಿತರಿಗೆ ಚಿಕಿತ್ಸೆ ಲಭ್ಯವಾಗದೆ ಸಾವನ್ನಪ್ಪುತ್ತಿದ್ದು, ಕೋವಿಡ್ ವರದಿ 24 ಗಂಟೆಗಳೊಳಗೆ ಬರುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಆರೋಗ್ಯ ಸಹಾಯವಾಣಿ ಕೇಂದ್ರದ ಮೂಲಕ ಬೆಡ್‌ಗಳು ಲಭ್ಯವಿರುವ ಆಸ್ಪತ್ರೆಗಳ ಬಗ್ಗೆ ಸೂಕ್ತ ಮಾಹಿತಿ ಒದಗಿಸಬೇಕಾಗಿದೆ. ಜಿಲ್ಲೆಯಲ್ಲಿ ಕೆಲವು ಆ್ಯಂಬುಲೆನ್ಸ್ಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಹೆಚ್ಚು ಆ್ಯಂಬುಲೆನ್ಸ್‌ಗಳನ್ನು ಒದಗಿಸಬೇಕಾಗಿದೆ ಎಂದು ತಿಳಿಸಿದರು.
ಪ್ರತಿ ಗ್ರಾಮದಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಕೋವಿಡ್ ಕೇರ್ ಕೇಂದ್ರವನ್ನು ತೆರೆಯಬೇಕಾಗಿದೆ. ಕೋವಿಡ್ ಲಸಿಕೆಯನ್ನು ಜನರಿಗೆ ಉಚಿತವಾಗಿ ನೀಡಬೇಕಾಗಿದೆ ಎಂದರು.
ಕೋವಿಡ್ ಖಚಿತತೆಗೆ ವೈದ್ಯರು ಸಿಟಿ ಸ್ಕ್ಯಾನಿಂಗ್ ಸೂಚಿಸುತ್ತಿದ್ದು, ಸಿಟಿ ಸ್ಕ್ಯಾನಿಂಗ್ ದರವು ಬಡವರಿಗೆ ಸಂಕಷ್ಟಕರವಾಗಿರುವುದರಿಂದ ಸ್ಕ್ಯಾನಿಂಗ್ ದರವನ್ನು ಕಡಿಮೆ ಮಾಡಬೇಕಾಗಿದೆ ಎಂದು ಹೇಳಿದರು.
ಕೋವಿಡ್ ಕರ್ಫ್ಯೂನಿಂದ ರೈತರು ಸಂಕಷ್ಟಕ್ಕೀಡಾಗಿದ್ದು, ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೆ ನಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ರೈತರ ಬೆಳೆ ಮಾರಾಟಕ್ಕೆ ಹೆಚ್ಚಿನ ಸಮಯಾವಕಾಶ ಕಲ್ಪಿಸಿ ಕೊಡಬೇಕು ಎಂದು ತಿಳಿಸಿದರು.
ಸ್ಮಶಾನಗಳಲ್ಲಿ ಮೂಲಸೌಕರ್ಯಕ್ಕೆ ಆದ್ಯತೆ ನೀಡಿ, ಅಲ್ಲಿಗೆ ಸಿಬ್ಬಂದಿಯನ್ನು ಹೆಚ್ಚಿಸಲು ಕ್ರಮಕೈಗೊಳ್ಳಬೇಕು. ಕೊರೊನಾ ಕರ್ತವ್ಯದಲ್ಲಿ ಮೃತಪಟ್ಟ ಕುಟುಂಬಗಳಿಗೆ ವಿಮಾ ಯೋಜನೆ ಒದಗಿಸಬೇಕಾಗಿದೆ. ಮುಖ್ಯವಾಗಿ ಕೊರೊನಾ ಸೋಂಕಿತರಿಗೆ ಅತ್ಮಸ್ಥೈರ್ಯವನ್ನು ತುಂಬಬೇಕಾಗಿದೆ ಎಂದು ಹೇಳಿದರು.